ಕಾರವಾರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಉತ್ತರ ಕನ್ನಡ ಜಿಲ್ಲೆ ಇಡಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಚ್.ಎಮ್. ರೇವಣ್ಣ ಹೇಳಿದರು
ಅವರು ಸೋಮವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರ ಬಡ ಜನಸಾಮಾನ್ಯರ ಸಬಲೀಕರಣಕ್ಕಾಗಿ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಫಲಾನುಭವಿಗಳನ್ನು ಗ್ಯಾರಂಟಿ ಯೋಜನೆಯಲ್ಲಿ ಒಳಪಡಿಸುವಲ್ಲಿ ಅಧಿಕಾರಿ ಸಿಬ್ಬಂದಿಗಳು ಪ್ರಮುಖ ಪಾತ್ರ ವಹಿಸಿದರ ಪರಿಣಾಮ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ತಳಮಟ್ಟದಿಂದ ಅಧಿಕಾರಿಗಳು ಸಿಬ್ಬಂದಿಗಳಿಂದ ಎಲ್ಲರಿಗೂ ಅಭಿನಂದನೆಗಳು ಎಂದರು.
ಗ್ಯಾರೆಂಟಿ ಯೋಜನೆಯ ಅನುಷ್ಠಾನದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧ್ಯಕ್ಷರು ಅತ್ಯಂತ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಗ್ಯಾರೆಂಟಿ ಯೋಜನೆ ವಂಚಿತರ ಮನೆಗಳಿಗೆ ಭೇಟಿ ನೀಡಿ ಅವರಿಗೆ ಸೌಲಭ್ಯಗಳನ್ನು ಮಂಜೂರು ಮಾಡಿಸುತ್ತಿದ್ದೂ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಮೊದಲ ಪ್ರಶಸ್ತಿ ಉತ್ತರಕನ್ನಡ ಜಿಲ್ಲೆಗೆ ನೀಡಲಾಗುವುದು ಎಂದರು.
ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈ ಯೋಜನೆಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ ಸಂಚಾರ ಮಾಡುವಂತೆ ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಸಾರಿಗೆ ಸಚಿವರ ಜೊತೆ ಚರ್ಚಿಸಿ ಹೆಚ್ಚಿನ ಹೊಸ ಬಸ್ ಮಂಜೂರು ಮಾಡಿಸಿಕೊಡಲಾಗುವುದು ಎಂದರು.
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಫಲಾನುಭವಿ ನೋಂದಣಿಗೆ ಕ್ರಮವಹಿಸಬೇಕು ಹಾಗೂ ಯುವನಿಧಿ ಫಲಾನುಭವಿಗಳಿಗೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜೊತೆ ಸೇರಿ ಕೌಶಲ್ಯಾಭಿವೃದ್ಧಿ ಕಾರ್ಯಾಗಾರವನ್ನು ಏರ್ಪಡಿಸುವಂತೆ ಸೂಚಿಸಿದ ಅವರು ಯವಜನತೆಯಿಂದ ಅಭಿಪ್ರಾಯ ಪಡೆದು ಅವಶ್ಯವಿರುವ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಏರ್ಪಡಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.