ಜಗಳೂರು: ಇಲ್ಲಿನ ರಂಗಯ್ಯನ ದುರ್ಗ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ವಾಸವಿರುವ ಏಷ್ಯದ ಖಂಡದ ಅಪರೂಪದ ಕಾಡುಪ್ರಾಣಿ ಕೊಂಡುಕುರಿ (Four Horned Antelope) ಗೆ ರಕ್ಷಣೆ ಇಲ್ಲ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಕಾಡುಪ್ರಾಣಿಗಳ ಬೇಟೆಗೆ ನಿರಂತರ ಪ್ರಯತ್ನಗಳು ನಡೆಯುತ್ತಿದ್ದು, ಏಷ್ಯದ ಖಂಡದ ಅಪರೂಪದ ಕಾಡುಪ್ರಾಣಿ ಕೊಂಡು ಕುರಿ (Kondukuri) ಗೆ ಕುತ್ತು ತರುತ್ತಿದೆ ಎಂಬ ಆತಂಕ ಪರಿಸರ ಪ್ರೇಮಿಗಳಲ್ಲಿ ಮೂಡಿಸಿದೆ. ಅರಣ್ಯ ಇಲಾಖೆ ರಂಗಯ್ಯನ ದುರ್ಗ ಸಂರಕ್ಷಿತ ಅರಣ್ಯ ಪ್ರದೇಶದ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳುತ್ತಿದೆ. ಆದರೆ ದುರುಳರು ಕಾಡುಪ್ರಾಣಿಗಳಿಗೆ ಬೇಟೆಗೆ ನಡೆಸುತ್ತಿರುವ ಪ್ರಯತ್ನಗಳು ಆಗಾಗ ಬೆಳಕಿದೆ ಬರುತ್ತಿವೆ. ಇಂತಹದ ಅನುಮಾನಕ್ಕೆ ಇತ್ತೀಚೆಗೆ ಬಲವಾದ ಸಾಕ್ಷಿ ದೊರತಿದ್ದು, ಅದಕ್ಕೆ ಅರಣ್ಯ ಇಲಾಖೆ ಏನು ಉತ್ತರ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಕೊಂಡುಕುರಿ ಬೇಟೆಗೆ ಕಚ್ಚಾಬಾಂಬ್ ಇಟ್ಟಿದ್ದರಾ ದುರುಳರು ?
ಜಗಳೂರು ತಾಲೂಕಿನ ರಂಗಯ್ಯನದುರ್ಗ ಕೊಂಡು ಕುರಿ ಅರಣ್ಯದಲ್ಲಿ ಬೇಟೆಗಾರರು ಕಾಡು ಪ್ರಾಣಿಗಳನ್ನು ಕೊಲ್ಲಲು ಇರಿಸಿದ್ದ ಕಚ್ಚಾ ಬಾಂಬ್ ಸಿಡಿದು ಹಸುವೊಂದು ಮೃತಪಟ್ಟ ಘಟನೆ ಈಚೆಗೆ ನಡೆದಿತ್ತು. ಬೇಟೆಗೆಗಾರರು ಕೊಂಡುಕುರಿ ಬೇಟೆಯಾಡಲು ಕಚ್ಚಾಬಾಂಬ್ ಇಟ್ಟಿದ್ದರಾ ಎಂಬ ಅನುಮಾನ ಜನರಲ್ಲಿ ಮೂಡಿಸಿದೆ. ಈಗೇ ಎಗ್ಗಿಲ್ಲದೇ ಬೇಟೆಗಳು ನಡೆದರೆ ಏಷ್ಯದ ಅಪರೂಪದ ಕಾಡುಪ್ರಾಣಿ ಕೊಂಡುಕುರಿ ವಿನಾಶದ ಅಂಚಿಗೆ ಸರಿಯುವ ಕಾಲ ದೂರ ಇಲ್ಲ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ಜಮೀನಿನಲ್ಲಿ ಸಿಕ್ಕಿತ್ತು ಕೊಂಡು ಕುರಿ
ವರ್ಷದ ಹಿಂದೆ ಕೊಂಡುಕುರಿಯ ಮರಿಯೊಂದು ರೈತರ ಜಮೀನನಲ್ಲಿ ಸಿಕ್ಕಿತ್ತು. ಆಗ ಕೃಷಿಕರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿ ಅದನ್ನು ಇಲಾಖೆ ಸುಪರ್ದಿಗೆ ಒಪ್ಪಿಸಿದ್ದರು. ಅಪರೂಪದ ಪ್ರಾಣಿಯೊಂದು ರಕ್ಷಣೆ ಇಲ್ಲದೆ ಎಲ್ಲಂದರಲ್ಲಿ ಸಿಗುತ್ತಿರುವುದು ನೋಡಿದರೆ ಅರಣ್ಯ ಇಲಾಖೆಯ ಕಾರ್ಯ ವೈಖರಿಯ ಬಗ್ಗೆ ಅನುಮಾನ ಮೂಡಿಸುತ್ತಿದೆ ಎನ್ನುತ್ತಾರೆ ಪರಿಸರ ಪ್ರೇಮಿಗಳು.
ಕಚ್ಚಾಬಾಂಬ್ ಸಿಡಿದು ಹಸುವಿನ ಬಾಯಿ ಛಿದ್ರ
ಈಚೆಗೆ ಗೋಡೆ ಗ್ರಾಮದ ರೈತ ರಂಗನಾಥ ಎಂಬುವವರು ಕಾಡಂಚಿನಲ್ಲಿ ಹಸು ಮತ್ತು ದನಗಳನ್ನು ಮೇಯಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಸಮಯದಲ್ಲಿ, ಹಸು ಇದ್ದಕಿದ್ದಂತೆ ಪಕ್ಕದಲ್ಲಿದ್ದ ಮಾಂಸದ ಮುದ್ದೆಯನ್ನು ಮೂಸಿ ನೋಡಿ, ತಿನ್ನಲು ಬಾಯಿ ಹಾಕಿದಾಗ ಕಚ್ಚಾಬಾಂಬ್ ಸಿಡಿದು ಹಸುವಿನ ಬಾಯಿ ಛಿದ್ರ ಛಿದ್ರವಾಗಿತ್ತು.
ಗಾಯಗೊಂಡ ಹಸುವನ್ನು ರಂಗನಾಥ್ ಮನೆಗೆ ತಲುಪಿಸಿದ್ದರು. ನಂತರ ದೇವಿಕೆರೆಯ ಪಶುವೈದ್ಯರಿಗೆ ಕರೆ ಮಾಡಿ ಚಿಕಿತ್ಸೆ ನೀಡಲು ಮನವಿ ಮಾಡಿದ್ದಾರೆ. ಆದರೆ, ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದು, ಹಸು ಮೃತಪಟ್ಟಿದೆ. ವಿಷಯ ತಿಳಿದು ರಂಗಯ್ಯನದುರ್ಗ ಕೊಂಡುಕುರಿ ವಲಯ ಅರಣ್ಯಾಕಾರಿ ಜ್ಯೋತಿ ಮೆಣಸಿನಕಾಯಿ ಸ್ಥಳಕ್ಕೆ ಭೇಟಿ ನೀಡಿದ್ದರು.
ಕೊಂಡುಕುರಿ ಅಭಯಾರಣ್ಯ ಪ್ರದೇಶದಿಂದ 50 ಮೀಟರ್ ದೂರದಲ್ಲಿ ಕಚ್ಚಾ ಬಾಂಬ್ ಸ್ಪೋಟವಾಗಿತ್ತು. ಹುಬ್ಬಳ್ಳಿಯಿಂದ ಬಾಂಬ್ ಪತ್ತೆ ದಳದ ತಜ್ಞರು ಬಂದು ಪರಿಶೀಲಿಸಿದ್ದರು. ಹಿರಿಯ ಅಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ತಪ್ಪಿತಸ್ಥರ ಪತ್ತೆಗೆ ಬಲೆ ಬೀಸಿದ್ದೇವೆ. ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ವನ್ಯಜೀವಿ ಅರಣ್ಯ ಸಂರಕ್ಷಣಾಕಾರಿ ಜ್ಯೋತಿ ಮೆಣಸಿನಕಾಯಿ ಮತ್ತು ಡಿಆರ್‌ಎಫ್ ಸತೀಶ್ ಹೇಳಿದ್ದರು. ಆದರೆ ಈವರೆಗೆ ಆ ಕಾರ್ಯ ಮಾತ್ರವಾಗಿಲ್ಲ ಎನ್ನುತ್ತಾರೆ ಜನ.