ಬೀದರ್: ಜಿಲ್ಲೆಯ ಬಸವಕಲ್ಯಾಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ವೇಗವಾಗಿ ಹೋಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಈ ವೇಳೆ ಕಾರಿನಲ್ಲಿದ್ದ ಕೋಟ್ಯಂತರ ಮೌಲ್ಯದ ಗಾಂಜಾ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಘಟನೆ ನಡೆದಿದೆ.
ಬಸವಕಲ್ಯಾಣ ತಾಲೂಕಿನ ರಾಜೇಶ್ವರದ ಬಳಿ ವೇಗವಾಗಿ ಕಾರು ಸಾಗುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದ ಮಹಿಳೆ ಕಾಣಿಸಿದ್ದು. ಆಕೆಯನ್ನು ರಕ್ಷಿಸುವ ಭರದಲ್ಲಿ ಚಾಲಕ ಕಾರಿನ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎನ್ನಲಾಗಿದೆ. ಕಾರು ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿತ್ತು.
ಕಾರು ಉರುಳಿದಾಗ, ಗಾಂಜಾದ ಪ್ಯಾಕೆಟ್‌ಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದವು. ಇದನ್ನು ಗಮನಿಸಿದ ಗ್ರಾಮಸ್ಥರು ಕಾರಿನಲ್ಲಿದ್ದ ಪಂಢರಪುರದ ನಿವಾಸಿಗಳಾದ ಫಿರೋಜ್ ಮತ್ತು ರಿಯಾಜ್‌ರನ್ನು ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದರು.
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಕಾರಿನಿಂದ 118 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ. ಸ್ವಲ್ಪ ಗಾಯಗೊಂಡ ಆರೋಪಿಗಳನ್ನು ಹಿಡಿದು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.