ಕಾರವಾರ: ಗರ್ಭದ ಹಸುವನ್ನು ಅಮಾನುಷವಾಗಿ ಹತ್ಯೆಗೈದು ಅದರ ಮಾಂಸವನ್ನು ಸಾಗಾಟ ಮಾಡಿದ ಹೊನ್ನಾವರ ತಾಲ್ಲೂಕಿನ ಸಾಲ್ಕೋಡದ ಕೊಂಡಾಕುಳಿ ಪ್ರಕರಣದಲ್ಲಿ ಭಾಗಿಯಾದ ನಾಲ್ವರನ್ನೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭಟ್ಕಳದ ಮದುವೆ ಮನೆಗೆ ಮಾಂಸ ಪೂರೈಕೆಯ ಉದ್ದೇಶದಿಂದ ದುಷ್ಟರು ಆಕಳನ್ನು ಕೊಂದು ಹೊಟ್ಟೆಯೊಳಗಿದ್ದ ಕರುವನ್ನು ಬಿಸಾಡಿದ್ದರು. ಹಸುವನ್ನು ತುಂಡು ತುಂಡಾಗಿ ಕತ್ತರಿಸಿ ಮಾಂಸ ಸಾಗಾಟ ಮಾಡಿದ್ದರು. ಈ ಪ್ರಕರಣ ಜಿಲ್ಲೆಯಷ್ಟೇ ಅಲ್ಲದೇ ರಾಜ್ಯದಾದ್ಯಂತ ದೊಡ್ಡ ಸುದ್ದಿಯಾದ ಬೆನ್ನಲ್ಲೇ ಪೊಲೀಸರು ಆರು ತಂಡ ರಚಿಸಿ ಆರೋಪಿಗಳ ಹುಡುಕಾಟ ನಡೆಸಿದ್ದರು. ಮೊದಲು ಇಬ್ಬರು ಸಿಕ್ಕಿಬಿದ್ದಿದ್ದರೂ ಇನ್ನಿಬ್ಬರು ತಲೆಮರೆಸಿಕೊಂಡಿದ್ದರು. ಆ ಇಬ್ಬರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಹೊನ್ನಾವರದ ಸಾಲ್ಕೋಡು, ಕೊಂಡದಕುಳಿ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಗೋ ಕಳ್ಳತನ ನಡೆಯುತ್ತಿತ್ತು. ಜನ ಆ ಭಾಗದ ಚಿರತೆ ದಾಳಿಯಿರಬಹುದೆಂದು ಅನುಮಾನಪಟ್ಟಿದ್ದರು. ಆದರೆ, ಜನವರಿ 19 ರಂದು ಗರ್ಭಿಣಿ ಹಸು ತುಂಡು ತುಂಡಾಗಿ ಬಿದ್ದಿರುವುದನ್ನು ನೋಡಿದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪ್ರಕರಣ ದಾಖಲಾದ ನಂತರ 400ಕ್ಕೂ ಅಧಿಕ ಶಂಕಿತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಇನ್ನಷ್ಟು ಗೋಮಾಂಸ ಭಕ್ಷಣೆಯ ಪ್ರಕರಣಗಳು ಹೊರ ಬಂದಿದ್ದು, ಅಕ್ರಮ ಜಾನುವಾರು ಸಾಗಾಟಗಳನ್ನು ಪೊಲೀಸರು ತಡೆದಿದ್ದರು.