ಬಾಗಲಕೋಟೆ: ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದ್ದು, ಯುವಕನೋರ್ವ ಹ್ಯಾಂಡಲ್ ಇಲ್ಲದ ಬೈಕ್ ಚಲಾಯಿಸುವ ಮೂಲಕ ವಿನೂತನವಾಗಿ ಕನ್ನಡ ಜಾಗೃತಿ ಮೂಡಿಸುತ್ತಿದ್ದಾನೆ. ಇಳಕಲ್ ನಗರದ ಯುವಕ ವೀರಣ್ಣ ಕುಂದರಗಿಮಠ ಎಂಬುವವರು ಈ ರೀತಿಯ ವಿನೂತನ ಪ್ರಯೋಗದ ಮೂಲಕ ಎಲ್ಲರ ಗಮನಸೆಳೆಯುತ್ತಿದ್ದಾನೆ.
ಹ್ಯಾಂಡಲ್ ಇಲ್ಲದ ಬೈಕ್ ಸವಾರಿ ಮಾಡುತ್ತ ಕನ್ನಡ ನಾಡು-ನುಡಿಯ ಕುರಿತು ಜಾಗೃತಿ ಮೂಡಿಸುತ್ತಿರುವ ವೀರಣ್ಣ ತಮ್ಮ ಬೈಕ್‌ಗೆ ಕನ್ನಡಮ್ಮನ ಚಿತ್ರ ಹಾಕಿ, ಜಾಗೃತಿ ಘೋಷವಾಕ್ಯ ಪಟದೊಂದಿಗೆ ಸಂಚಾರ ಮಾಡುತ್ತಿದ್ದಾನೆ. ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಘೋಷದೊಂದಿಗೆ ಬೆಳೆಸಬೇಕು ಕನ್ನಡ, ಉಳಿಸಬೇಕು ಕನ್ನಡ ಎಂದು ಕನ್ನಡದ ಉಳಿವಿಗೆ ತಮ್ಮದೇ ರೀತಿಯಲ್ಲಿ ಅಳಿಲುಸೇವೆ ಮಾಡುತ್ತಿದ್ದಾನೆ.
ಎರಡು ಕೈಯಲ್ಲಿ ಕನ್ನಡ ಬಾವುಟ ಹಿಡಿದು ಬೈಕ್ ಸವಾರಿ ಮೂಲಕ ಗಮನ ಸೆಳೆಯುತ್ತಿರುವ ವೀರಣ್ಣ ಕಂಡು ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ. ಕನ್ನಡ ಉಳಿಸಬೇಕು, ಕನ್ನಡ ಬಳಸಬೇಕು ಈ ಮೂಲಕ ಕನ್ನಡ ಬೆಳೆಸಬೇಕು ಎನ್ನುವ ಮಾತುಗಳನ್ನಾಡುವ ವೀರಣ್ಣ ಇಂದಿನ ಯುವಜನತೆಗೆ ಮಾದರಿಯಾಗಿದ್ದಾನೆ.