ಹೈದರಾಬಾದ್: ಹಸಿ ಮೊಟ್ಟೆಯ ಒಳಗಿರುವ ಧ್ರವದಿಂದ ತಯಾರಿಸುವ ಮಯೋನಿಸ್ ತಯಾರಿ ಹಾಗೂ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಿ ಆದೇಶ ಹೊರಡಿಸಿದೆ.
ಹೌದು, ಪಿಜ್ಜಾ ಸೇರಿದಂತೆ ಬಹುತೇಕ ಪಾಶ್ಚಿಮಾತ್ಯ ಖಾದ್ಯಗಳ ನಿಷೇಧದ ಬೆನ್ನಲ್ಲೇ ತೆಲಂಗಾಣ ಸರ್ಕಾರ ಮಯೋನಿಸ್‌ಗೆ ಒಂದು ವರ್ಷ ನಿಷೇಧ ಹೇರಿದೆ. ಮೊಟ್ಟೆ ಮತ್ತು ಎಣ್ಣೆಯನ್ನು ಬಳಸಿ ತಯಾರಿಸುವ ಮಯೋನೀಸ್‌ನಿಂದ ಫುಡ್ ಪಾಯ್ಸನಿಂಗ್ ದೂರುಗಳು ಪತ್ತೆಯಾಗಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎದು ಆಹಾರ ಭದ್ರತೆ ಮಂಡಳಿ ತಿಳಿಸಿದೆ.
ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ಓರ್ವ ಮಹಿಳೆ ಮೋಮೋಸ್ ಸೇವಿಸಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಹಲವೆಡೆ ದಾಳಿ ನಡೆಸಿ ಈ ಕ್ರಮವನ್ನು ಸರ್ಕಾರ ತೆಗೆದುಕೊಂಡಿದೆ. ಈ ಘಟನೆ ಬೆನ್ನಲ್ಲೇ ಹೈದರಾಬಾದ್‌ನ ಹಲವು ಬೀದಿ ಬದಿ ಅಂಗಡಿ, ಮೋಮೊಸ್ ಮಳಿಗೆ, ಶವರ್ಮಾ ಹೋಟೆಲ್ ಸೇರಿ ಹಲವು ಆಹಾರ ಮಳಿಗೆಗಳ ಮೇಲೆ ದಾಳಿ ನಡೆಸಿ ಇನ್ನು 20 ಭಾದಿತರನ್ನು ಗುರುತಿಸಿದೆ. ಬಳಿಕ ಬುಧವಾರದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.
ಇತ್ತೀಚೆಗೆ ಗೋಬಿ ಮಂಚೂರಿಗೆ ಬಳಸುವ ಬಣ್ಣದಲ್ಲಿ ಕ್ಯಾನ್ಸರ್ ಕಾರಕ ಪತ್ತೆಯಾದ ಬೆನ್ನಲ್ಲೇ ಕರ್ನಾಟಕ ಸರ್ಕಾರವು ಕಬಾಬ್, ಗೋಬಿ ಬಣ್ಣವನ್ನು ನಿಷೇಧಿಸಿತ್ತು. ಬಳಿಕ ಗೋಲ್‌ಗಪ್ಪ ಪಾನಿಗೆ ಬಳಸುವ ಬಣ್ಣಕ್ಕೂ ನಿಷೇಧ ಹೇರಿತ್ತು.
ಇದರ ತಯಾರಿಸುವ ರೀತಿ:
ಆಲಿವ್ ಆಯಿಲ್ ಮತ್ತು ಹಸಿ ಮೊಟ್ಟೆಯ ಒಳಗಿರುವ ಧ್ರವ ಸೇರಿಸಿ ತಯಾರಿಸುವ ಪದಾರ್ಥ ಇದು. ಎರಡೂ ಪದಾರ್ಥಗಳನ್ನು ಒಟ್ಟಿಗೆ ಹಾಕಿ ಚೆನ್ನಾಗಿ ಬೆರೆಸಿದರೆ, ಬೆಣ್ಣೆ ರೀತಿಯ ಪದಾರ್ಥ ಸೃಷ್ಟಿಯಾಗುತ್ತದೆ. ಇದಕ್ಕೆ ವಿನೇಗರ್, ನಿಂಬೆ ರಸ ಕೂಡಾ ಸೇರಿಸಲಾಗುತ್ತದೆ. ಇದು ಹಸಿ ಮೊಟ್ಟೆಯಲ್ಲಿ ಮಾಡುವ ಕಾರಣ ಸೂಕ್ತ ರೀತಿಯಲ್ಲಿ ತಯಾರಿಸದೇ ಹೋದಲ್ಲಿ ಅದು ವಾಂತಿ, ಭೇದಿ, ವಾಕರಿಕೆಗೆ ಕಾರಣವಾಗುವ ಬ್ಯಾಕ್ಟಿರಿಯಾ ಸೃಷ್ಟಿಗೆ ಕಾರಣವಾಗಬಲ್ಲದು.
ಕೇರಳದಲ್ಲೂ ನಿಷೇಧ:
2023ರ ಜನವರಿಯಲ್ಲಿ ಕೇರಳ ಸರ್ಕಾರವು ಆಹಾರ ಕಲಬೆರಿಕೆ ಅಡಿಯಲ್ಲಿ ಮಯೋನಿಸ್ ಬಳಕೆ ಮೇಲೆ ನಿಷೇಧ ಹೇರಿತ್ತು. ಕೇರಳ ಬಳಿಕ ತೆಲಂಗಾಣ ಸರ್ಕಾರ ನಿಷೇಧ ಮಾಡಿದೆ.