ಭುವನೇಶ್ವರ್: ಬಂಗಾಳಕೊಲ್ಲಿಯಲ್ಲಿ ಅಪ್ಪಳಿಸಿದ್ದ ದಾನಾ ಚಂಡಮಾರುತದಿಂದ ವಾಯುಭಾರ ಕುಸಿತವಾಗಿರುವ ಹಿನ್ನಲೆ ಒಡಿಶಾದ ಹಲವು ಭಾಗಗಳಲ್ಲಿ ಶನಿವಾರ ಲಘುವಾಗಿ ಸಾಧಾರಣ ಮಳೆಯಾಗಿದೆ. ಈ ಮೂಲಕ ದಾನಾ ಅಬ್ಬರ ನಿಧಾನವಾಗಿ ದುರ್ಬಲಗೊಳ್ಳುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
IMD ಬಿಡುಗಡೆಗೊಳಿಸಿದ್ದ ಹವಾಮಾನ ಬುಲೆಟಿನ್ ಪ್ರಕಾರ, ಕಳೆದ 6 ಗಂಟೆಗಳಲ್ಲಿ ದಾನಾ ಚಂಡಮಾರುತ ಉತ್ತರ ಒಡಿಶಾದ ಪಶ್ಚಿಮಕ್ಕೆ ಚಲಿಸಿದೆ. ಜೊತೆಗೆ ವಾಯುಭಾರ ಕುಸಿತ ಕಂಡ ಪ್ರದೇಶದಲ್ಲಿ ಚಂಡಮಾರುತ ದುರ್ಬಲವಾಗುತ್ತಾ ಸಾಗಿದ್ದು, ಮುಂದಿನ 12 ಗಂಟೆಗಳಲ್ಲಿ ಮತ್ತಷ್ಟು ದುರ್ಬಲಗೊಂಡು ಕೊನೆಗೊಳ್ಳಲಿದೆ ಎಂದು ತಿಳಿಸಿದೆ.
ದಾನಾ ಪ್ರಭಾವದಿಂದ, ಅನೇಕ ಸ್ಥಳಗಳಲ್ಲಿ ಮಳೆ ಮತ್ತು ಪ್ರತಿಕೂಲ ವಾತಾವರಣ ನಿರ್ಮಾಣವಾಗಿದ್ದು, ಇದರಿಂದಾಗಿ ಚಂಡಮಾರುತ ಪೀಡಿತ ಪ್ರದೇಶಗಳಾದ ಭದ್ರಕ್, ಕೇಂದ್ರಪಾರ್ ಮತ್ತು ಬಾಲಸೋರ್ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಅಡ್ಡಿ ಅನುಭವಿಸುವಂತಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
IMD ಮೂಲಗಳ ಪ್ರಕಾರ, ಬಾಲಸೋರ್ ಜಿಲ್ಲೆಯ ಔಪಾಡಾದಲ್ಲಿ ಅತಿ ಹೆಚ್ಚು ಅಂದರೆ 240 ಮಿಮೀ ಮಳೆಯಾಗಿದ್ದು, ಭದ್ರಕ್ ಜಿಲ್ಲೆಯ ಧಮ್‌ನಗರದಲ್ಲಿ 215 ಮಿಮೀ, ಬಾಲಸೋರ್ ಜಿಲ್ಲೆಯ ಖೈರಾದಲ್ಲಿ 209 ಮಿಮೀ, ಭದ್ರಕ್ ಜಿಲ್ಲೆಯ ಬಾಂಟ್‌ನಲ್ಲಿ 187 ಮಿಮೀ ಮಳೆಯಾಗಿದೆ. ಈ ಹಿನ್ನಲೆ ಬಾಲಸೋರ್, ಭದ್ರಕ್, ಮಯೂರ್‌ಭಂಜ್, ಕೇಂದ್ರಪಾರ ಮತ್ತು ಕಿಯೋಂಜಾರ್ ಜಿಲ್ಲೆಗಳಲ್ಲಿ ಶನಿವಾರ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಬಹುತೇಕ ಶಾಲೆಗಳು ನಿರಾಶ್ರಿತರಿಗೆ ಆಶ್ರಯ ನೀಡಿದ್ದು, ಚಂಡಮಾರುತದಿಂದ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಸಹ ಮುಚ್ಚಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಉತ್ತರ ಒಡಿಶಾದ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಮತ್ತು ದಕ್ಷಿಣ ಒಡಿಶಾದ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ನೀಡಿದೆ. “ಕಳೆದ 12 ಗಂಟೆಗಳಲ್ಲಿ ಕನಿಷ್ಠ 16 ಸ್ಥಳಗಳಲ್ಲಿ 100 ಮಿಮೀಗಿಂತ ಹೆಚ್ಚಿನ ಮಳೆಯಾಗಿದೆ, ನಾಲ್ಕು ಸ್ಥಳಗಳಲ್ಲಿ 200 ಮಿಮೀಗಿಂತ ಹೆಚ್ಚು ಮಳೆಯಾಗಿದೆ” ಎಂದು ಹವಾಮಾನ ಅಧಿಕಾರಿ ತಿಳಿಸಿದ್ದಾರೆ.