ಹೈದರಾಬಾದ್: ಅಲ್ಲು ಅರ್ಜುನ್ ಅವರ ಬಹು ನಿರೀಕ್ಷಿತ ಚಿತ್ರ ‘ಪುಷ್ಪ 2: ದಿ ರೂಲ್’ ಇದೇ ಡಿಸೆಂಬರ್ 5 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲು ಸಿದ್ಧವಾಗಿದೆ. ಹೈದರಾಬಾದ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು ಈ ವೇಳೆ ವಿವಿಧ ರಾಜ್ಯಗಳ ಪ್ರಮುಖ ವಿತರಕರು ಸಹ ಭಾಗಿಯಾಗಿದ್ದರು.
‘ಪುಷ್ಪ 2’, ತೆಲುಗು, ತಮಿಳು, ಮಲಯಾಳಂ, ಹಿಂದಿ, ಕನ್ನಡ ಮತ್ತು ಬೆಂಗಾಲಿ ಸೇರಿ ಆರು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು ಎಲ್ಲಾ ಭಾಷೆಯ ಪ್ರೇಕ್ಷಕರನ್ನು ತಲುಪಲಿದೆ. ಚಿತ್ರವು ಸುಮಾರು 3,000 ಸ್ಥಳಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಅಭಿಮಾನಿಗಳಿಗೆ ಅದ್ಭುತವಾದ ಸಿನಿಮೀಯ ಅನುಭವವನ್ನು ನೀಡಲಿದೆ. ಚಿತ್ರವು ಬಿಡುಗಡೆಗೆ ಮುನ್ನವೇ ಸುಮಾರು 420 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿಕೊಂಡಿದ್ದು, ಇದು ಇಲ್ಲಿಯವರೆಗಿನ ಯಾವುದೇ ತೆಲುಗು ಚಿತ್ರಕ್ಕಿಂತ ಹೆಚ್ಚಿನ ಪ್ರಿ-ರಿಲೀಸ್ ಅಂಕಿ ಅಂಶವಾಗಿದೆ.
ಈಗಾಗಲೇ ಚಿತ್ರ ಬಿಡುಗಡೆಗೂ ಮುನ್ನವೇ ಹುಟ್ಟುಹಾಕಿರುವ ನಿರೀಕ್ಷೆಗಳಿಂದಾಗಿ ಬಿಡುಗಡೆ ಬಳಿಕ ಪುಷ್ಪ-2 ಬ್ಲಾಕ್ ಬಸ್ಟರ್ ಹಿಟ್ ಆಗಿ, 1,000 ಕೋಟಿಗಿಂತ ಹೆಚ್ಚಿನ ಗಳಿಕೆಯನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಚಿತ್ರತಜ್ಞರು ಅಂದಾಜಿಸಿದ್ದಾರೆ. ಚಿತ್ರ ಬಿಡುಗಡೆಯ ದಿನದಂದು ಕೇವಲ ಹಿಂದಿ ಭಾಷೆಯೊಂದರಿಂದಲೇ 40-50 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಿದೆ ಎಂದು ಅಂದಾಜಿಸಲಾಗಿದೆ.
ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ನಟಿಸಿದ್ದಾರೆ. ಪೋಷಕ ಪಾತ್ರದಲ್ಲಿ ಜಗದೀಶ್ ಪ್ರತಾಪ್ ಬಂಡಾರಿ, ಜಗಪತಿ ಬಾಬು, ಪ್ರಕಾಶ್ ರಾಜ್, ಮತ್ತು ಅನಸೂಯಾ ಭಾರದ್ವಾಜ್ ಮುಂತಾದ ಪ್ರಮುಖ ನಟರು ಇದ್ದಾರೆ. ಚಿತ್ರದ ಸಂಗೀತವನ್ನು ದೇವಿ ಶ್ರೀ ಪ್ರಸಾದ್ ಸಂಯೋಜಿಸಿದ್ದಾರೆ.