ಹಾವೇರಿ: ಮಗನ ಸಾವಿನ ಸುದ್ದಿ ತಿಳಿದು ತಂದೆಯೂ ಹೃದಯಾಘಾತದಿಂದ ಸಾವನ್ನಪ್ಪಿರುವ ಮನಕಲುಕುವ ಘಟನೆ ಹಾವೇರಿಯಲ್ಲಿ ನಡೆದಿದೆ. ತಂದೆ ಡಾ.ವೀರಭದ್ರಪ್ಪ ಗುಂಡಗಾವಿ ಹಾಗೂ ಮಗ ಡಾ.ವಿನಯ ಗುಂಡಗಾವಿ ಮೃತಪಟ್ಟಿರುವ ಅಪ್ಪ-ಮಗನಾಗಿದ್ದಾರೆ.
ನಗರದ ಬಸವೇಶ್ವರ ನಗರದ ನಿವಾಸಿಯಾಗಿರುವ ಡಾ.ವೀರಭದ್ರಪ್ಪ ಗುಂಡಗಾವಿ ವೃತ್ತಿಯಲ್ಲಿ ವೈದ್ಯರಾಗಿದ್ದು, ಮಗ ಡಾ.ವಿನಯ ಗುಂಡಗಾವಿ ಸಹ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಇಂದು ಮಗ ಡಾ.ವಿನಯ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆ ತಂದೆ ಡಾ.ವೀರಭದ್ರಪ್ಪ ಅವರಿಗೂ ಸಹ ಹೃದಯಾಘಾತವಾಗಿ ಕುಸಿದುಬಿದ್ದು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.
ಒಂದೇ ದಿನ ತಂದೆ, ಮಗ ಹೃದಯಾಘಾತದಿಂದ ಸಾವನ್ನಪ್ಪಿರುವುದು ಕುಟುಂಬಸ್ಥರಿಗೆ ದಿಕ್ಕೇ ತೋಚದಂತಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಪ್ಪ-ಮಗ ಒಂದೇ ದಿನ ಕೊನೆಯುಸಿರೆಳೆದಿರುವುದು ಕುಟುಂಬಸ್ಥರು ಮಾತ್ರವಲ್ಲದೇ ಬಸವೇಶ್ವರ ನಗರದ ನಿವಾಸಿಗಳಿಗೂ ತೀವ್ರ ಬೇಸರ ಉಂಟುಮಾಡಿದೆ.