ಆಂಧ್ರಪ್ರದೇಶ: ಆಂಧ್ರಪ್ರದೇಶ ಜಿಲ್ಲೆಯ ಕಲಕಡ ಗ್ರಾಮದಲ್ಲಿ ಖಾಸಗಿ ಬಸ್‌ವೊಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿ, ಇಬ್ಬರು ಗಾಯಗೊಂಡ ದುರ್ಘಟನೆ ಸಂಭವಿಸಿದೆ. ಸೋಮವಾರ ರಾತ್ರಿ 9.30ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ರಾಯಚೋಟಿ ಉಪವಿಭಾಗದ ಪೊಲೀಸ್ ಅಧಿಕಾರಿ ಕೃಷ್ಣ ಮೋಹನ್ ತಿಳಿಸಿದ್ದಾರೆ.
ಖಾಸಗಿ ಬಸ್ ಪಿಲೇರ್ ಕಡೆಯಿಂದ ರಾಯಚೋಟಿ ಕಡೆಗೆ ಬರುತ್ತಿದ್ದು, ಇನ್ನೊಂದು ಬಸ್ ಅನ್ನು ಓವರ್‌ಟೇಕ್ ಮಾಡಲು ಮುಂದಾದ ವೇಳೆ ಎದುರಿನಿಂದ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೊಬ್ಬ ವ್ಯಕ್ತಿ ಮಂಗಳವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಗಾಯಗೊಂಡಿರುವ ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಬಸ್ ಚಿತ್ತೂರಿನಿಂದ ಹೈದರಾಬಾದ್‌ಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಚಾಲಕನ ನಿರ್ಲಕ್ಷ್ಯತನದ ಚಾಲನೆಯಿಂದಲೇ ಅಪಘಾತ ಸಂಭವಿಸಿದ್ದು ಬಸ್ ಚಾಲಕನ ವಿರುದ್ಧ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಿ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.