ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಸಂಬಂಧ ಸಿಎಂ ಸಿದ್ದರಾಮಯ್ಯ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು, ಮೈಸೂರಿನ ಆಗಿನ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಪಾಲಯ್ಯ ಅವರಿಗೆ ಮತ್ತೊಂದು ನೋಟಿಸ್ ನೀಡಿದ್ದಾರೆ.
2004ರಲ್ಲಿ ಮೈಸೂರು ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಪಾಲಯ್ಯ ಅವರು, ಭೂಮಿ ಪರಭಾರೆಯ ದಾಖಲಾತಿಗಳಿಗೆ ಸಹಿ ಮಾಡಿದ್ದರು. ಹೀಗಾಗಿ, ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಈ ಹಿಂದೆ ನೋಟಿಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗಿರಲಿಲ್ಲ. ಆದ್ದರಿಂದ ಈಗ 2ನೇ ಬಾರಿ ರಾಮಕೃಷ್ಣ ನಗರದಲ್ಲಿರುವ ಅವರ ಮನೆಗೆ ತೆರಳಿದ ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ನಿವೇಶನ ಹಂಚಿಕೆ ಸಂಬಂಧ ದಾಖಲಾಗಿರುವ ಪ್ರಕರಣದ ವಿಚಾರಣೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು, ಪ್ರಕರಣದ 3ನೇ ಆರೋಪಿ ಮಲ್ಲಿಕಾರ್ಜುನಸ್ವಾಮಿ (ಸಿದ್ದರಾಮಯ್ಯ ಅವರ ಬಾಮೈದ), 4ನೇ ಆರೋಪಿ ದೇವರಾಜು (ಜಮೀನು ಮಾರಿದವರು) ಹಾಗೂ ಆಗ ಜಿಲ್ಲಾಧಿಕಾರಿಯಾಗಿದ್ದ ಸಂಸದ ಜಿ.ಕುಮಾರ್ ನಾಯ್ಕ್ ಅವರನ್ನು ವಿಚಾರಣೆ ಮಾಡಿದ್ದಾರೆ. ಆದರೆ, ನಿವೃತ್ತ ಪಾಲಯ್ಯ ಅವರು ವಿಚಾರಣೆಗೆ ಹಾಜರಾಗಿಲ್ಲ.