ಕಾರವಾರ: ಕರಾವಳಿ ನಗರಿ ಕಾರವಾರದಲ್ಲೂ ಡಿಜಿಟಲ್ ಅರೆಸ್ಟ್ ಪ್ರಕರಣವೊಂದು ವರದಿಯಾಗಿದೆ. ನಗರದ ವ್ಯಕ್ತಿಯೋರ್ವರಿಗೆ ಪೊಲೀಸ್ ಸಮವಸ್ತ್ರದಲ್ಲಿ ಕರೆಮಾಡಿದ ವಂಚಕರು ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಹಣವನ್ನು ವಂಚನೆ ಮಾಡಿದ್ದಾರೆ.
ನಗರದ ನಿವಾಸಿ ವಿಲ್ಸನ್ ಫರ್ನಾಂಡೀಸ್ ಎಂಬುವವರಿಗೆ ಶುಕ್ರವಾರ ಅಪರಿಚಿತ ವ್ಯಕ್ತಿಯೋರ್ವ ಕರೆಮಾಡಿ, ನಿಮ್ಮ ಹೆಸರಿನಲ್ಲಿ ಬಂದ ಕೋರಿಯರ್ ಒಂದರಲ್ಲಿ ಎಂಡಿಎಂಎ ಮಾದಕವಸ್ತು ಸಿಕ್ಕಿದ್ದಾಗಿ ಹೇಳಿದ್ದಾನೆ. ಬಳಿಕ ಮುಂಬೈ ಪೊಲೀಸರಿಗೆ ಕರೆ ವರ್ಗಾಯಿಸೋದಾಗಿ, ಪೊಲೀಸ್ ಸಮವಸ್ತ್ರದಲ್ಲಿದ್ದ ಇನ್ನೋರ್ವನೊಂದಿಗೆ ಮಾತನಾಡಿಸಿದ್ದಾನೆ.
ಇನ್ನೋರ್ವ ವ್ಯಕ್ತಿ ನಿಮ್ಮ ಹೆಸರಿನಲ್ಲಿರುವ ಪಾರ್ಸೆಲ್‌ನಲ್ಲಿ ಮಾದಕ ವಸ್ತು ಸಿಕ್ಕಿದ್ದು, ಪ್ರಕರಣ ದಾಖಲಿಸಿ ಬಂಧಿಸೋದಾಗಿ ಬೆದರಿಸಿದ್ದಾನೆ. ಅಲ್ಲದೇ ಈ ವಿಚಾರವನ್ನು ಎಲ್ಲಿಯೂ ಹೇಳದಂತೆ ಎಚ್ಚರಿಕೆ ನೀಡಿದ್ದು, ಪ್ರಕರಣ ಮುಚ್ಚಿಹಾಕಬೇಕಾದರೆ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಅದರಂತೆ ಸುಮಾರು 3,80,100 ರೂಪಾಯಿಗಳನ್ನು ವಂಚಕರು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದು, ಬಳಿಕ ತಾನು ವಂಚನೆಗೆ ಒಳಗಾಗಿದ್ದು ಅರಿವಾಗಿದೆ.
ಕೊನೆಗೆ ಕಾರವಾರದ ಸೈಬರ್ ಅಪರಾಧಗಳ ತನಿಖೆಯ ಸೆನ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ.