ಶಿರಸಿ: ಬಚ್ಚಲು ಒಲೆಗೆ ಬೆಂಕಿ ಹಾಕುವ ವೇಳೆ ಬೆಂಕಿ ತಗುಲಿ ಮಹಿಳೆಯೋರ್ವರು ಸಾವನ್ನಪ್ಪಿದ ಧಾರುಣ ಘಟನೆ ಶಿರಸಿಯ ಹುಣಸೆಕೊಪ್ಪದ ಹೀರೆಬೈಲ್ ಕುಂಟೆಮನೆಯಲ್ಲಿ ನಡೆದಿದೆ. ಗಂಗೆ ಗೌಡ(55) ಬೆಂಕಿ ತಗುಲಿ ಸಾವನ್ನಪ್ಪಿದ ಮಹಿಳೆಯಾಗಿದ್ದಾರೆ.
ಬೆಳಿಗ್ಗೆ ಸ್ನಾನಕ್ಕೆ ನೀರು ಕಾಯಿಸುವ ನಿಟ್ಟಿನಲ್ಲಿ ಗಂಗೆ ಗೌಡ ಒಲೆಗೆ ಪೆಟ್ರೋಲ್ ಹಾಕಿದ್ದರು. ಈ ವೇಳೆ ಗಂಗೆ ಅವರು ಧರಿಸಿದ್ದ ಬಟ್ಟೆಗೂ ಪೆಟ್ರೋಲ್ ತಾಗಿದ್ದು, ಇದರ ಅರಿವಿಲ್ಲದೇ ಲೈಟರ್ ನಿಂದ ಬೆಂಕಿ ಹಚ್ಚುತ್ತಿದ್ದಂತೆ ಮಹಿಳೆ ಬಟ್ಟೆಗೂ ಬೆಂಕಿ ತಗುಲಿದೆ. ಪರಿಣಾಮ ಬೆಂಕಿ ಹೊತ್ತಿ ಉರಿದಿದ್ದು, ಹತ್ತಿರದಲ್ಲೇ ಇದ್ದ ಪೆಟ್ರೋಲ್ ತುಂಬಿದ್ದ ಬಾಟಲ್‌ಗೂ ಬೆಂಕಿ ವ್ಯಾಪಿಸಿ ಧಗಧಗನೆ ಹೊತ್ತಿ ಉರಿದಿದೆ.
ಇದರಿಂದ ಗಂಗೆ ಗೌಡಗೆ ಗಂಭೀರವಾದ ಸುಟ್ಟ ಗಾಯಗಳಾಗಿದ್ದು, ಕೂಡಲೇ ಅವರನ್ನು ಶಿರಸಿಯ ಪಂಡಿತ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸುಟ್ಟಗಾಯಗಳು ಗಂಭೀರವಾಗಿದ್ದ ಹಿನ್ನಲೆ ವೈದ್ಯರ ಸಲಹೆಯಂತೆ ನಗರದ ಟಿಎಸ್ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅಲ್ಲಿಯೂ ಸಹ ಸೂಕ್ತ ಚಿಕಿತ್ಸೆ ಲಭ್ಯವಾಗದ ಹಿನ್ನಲೆ ಮಹಿಳೆಯನ್ನು ಮಂಗಳೂರಿನ ಕೆ.ಎಸ್.ಹೆಗಡೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಆದರೆ ಗಂಗೆ ಗೌಡ ಪರಿಸ್ಥಿತಿ ಗಂಭೀರವಾಗಿದ್ದ ಹಿನ್ನಲೆ ಮಹಿಳೆ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳಿದ್ದು, ಕುಟುಂಬಸ್ಥರು ಅವರನ್ನು ವಾಪಸ್ ಕರೆತರುವ ವೇಳೆ ಗಂಗೆ ಗೌಡ ಕೊನೆಯುಸಿರೆಳೆದಿದ್ದಾರೆ.