ದುಬೈ: ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 7ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಅಮೋಘ 44 ರನ್ ಗಳ ಗೆಲುವು ದಾಖಲಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 176 ರನ್ ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಫಾಫ್ ಡುಪ್ಲೆಸಿಸ್ (43 ರನ್, 35 ಎಸೆತ), ಕೇದಾರ್ (26 ರನ್, 21 ಎಸೆತ), ಹೊರತು ಪಡಿಸಿ ಉಳಿದ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಇದರಿಂದ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 44 ರನ್ ಅಂತರದಿಂದ ಸೋಲಿಗೆ ಶರಣಾಯತು. ಡೆಲ್ಲಿ ಕ್ಯಾಪಿಟಲ್ ತಂಡದ ಪರ ಕಗಿಸೊ ರಬಾಡ 3 ವಿಕೆಟ್, ಎನ್ರಿಚ್ ನೊರ್ಟ್ಜೆ 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದಕ್ಕೂ ಮುಂಚೆ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭಿಕ ಆಟಗಾರ ಪೃಥ್ವಿ ಷಾ (64 ರನ್, 43 ಎಸೆತ), ಶಿಖರ್ ಧವನ್ (35 ರನ್, 27 ಎಸೆತ), ರಿಷಬ್ ಪಂತ್ (37 ರನ್, 25 ಎಸೆತ), ಮತ್ತು ನಾಯಕ ಶ್ರೇಯಸ್ ಅಯ್ಯರ್ (26 ರನ್, 22 ಎಸೆತ) ಆಟದ ನೆರವಿನಿಂದ ತಂಡವು ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 175 ರನ್ ಗಳಿಸಿತು. ಚೆನ್ನೈ ಪರ ಚಾಪಿಯೂಷ್ ಚಾವ್ಲಾ 2 ವಿಕೆಟ್, ಸ್ಯಾಮ್ ಕರಣ್ 1 ವಿಕೆಟ್ ಪಡೆದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಪರ ಅಮೋಘ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದ ಪೃಥ್ವಿ ಷಾ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.