ಕಾರವಾರ: ಯಲ್ಲಾಪುರ ತಾಲ್ಲೂಕಿನ ಅರಬೈಲ್ ಘಟ್ಟದಲ್ಲಿ ಜ.22 ರಂದು ಲಾರಿ ಪಲ್ಟಿಯಾದ ಪರಿಣಾಮ ಹತ್ತು ಮಂದಿ ತರಕಾರಿ ವ್ಯಾಪಾರಿಗಳು ಧಾರುಣವಾಗಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಪೊಲೀಸರು ಆರೋಪಿತರಾದ ಲಾರಿ ಚಾಲಕ ಹಾಗೂ ಮಾಲೀಕನನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.
ಲಾರಿ ಚಾಲಕ ಹಾವೇರಿ ಜಿಲ್ಲೆಯ ಸವಣೂರಿನ ಎಸ್.ಎಂ.ಕೃಷ್ಣಾ ನಗರ ನಿವಾಸಿ ನಿಜಾಮುದ್ದೀನ ಕರೀಮಖಾನ ಸೌದಾಗರ ಹಾಗೂ ಮಾಲೀಕ ಖಾದರಿ ನಗರ ನಿವಾಸಿ ಗೌಸಮೊಹಿದ್ದೀನ ಬಸೀರ ಅಹಮ್ಮದ ಲೋಹಾರ ಬಂಧಿತ ಆರೋಪಿಗಳಾಗಿದ್ದಾರೆ.
ಜನವರಿ 22 ರಂದು ಸವಣೂರು ಮಾರುಕಟ್ಟೆಯಿಂದ ಕುಮಟಾಕ್ಕೆ ಸುಮಾರು 28 ಮಂದಿ ಹಣ್ಣು, ತರಕಾರಿ ವ್ಯಾಪಾರಸ್ಥರನ್ನು ತರಕಾರಿ, ಹಣ್ಣು ಸಹಿತ ಲಾರಿಯಲ್ಲಿ ಹತ್ತಿಸಿಕೊಂಡು ಬರಲಾಗುತ್ತಿತ್ತು. ಮುಂಡಗೋಡ, ಯಲ್ಲಾಪುರ ಮಾರ್ಗವಾಗಿ ಆಗಮಿಸಿದ ಲಾರಿ, ಬೆಳಗಿನ ಜಾವ 4:15ರ ಸುಮಾರಿಗೆ ಅರಬೈಲ್ ಘಟ್ಟದ ಗುಳ್ಳಾಪುರ ಬಳಿ ಆಗಮಿಸುತ್ತಿದ್ದ ವೇಳೆ ಲಾರಿಯನ್ನು ಅಜಾಗರೂಕತೆಯಿಂದ, ಅತೀವೇಗವಾಗಿ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು, ಪರಿಣಾಮ ತರಕಾರಿ ಚೀಲಗಳ ಅಡಿಗೆ ಸಿಲುಕಿ ಲಾರಿಯಲ್ಲಿದ್ದ 10 ಮಂದಿ ಸಾವನ್ನಪ್ಪಿದ್ದರು. ಅಲ್ಲದೇ ಚಾಲಕ ಸೇರಿ ಉಳಿದ 18 ಮಂದಿಗೆ ಮುಖ, ಕೈಕಾಲು, ತಲೆಗೆ ಗಾಯಗಳಾಗಿದ್ದು, ಕೆಲವರು ಗಂಭೀರ ಗಾಯಗೊಂಡಿದ್ದರು.
ಘಟನೆ ಸಂಬಂಧ ನೂರಅಹ್ಮದ್ ಮಹಮ್ಮದ ಜಾಫರ್ ಜಮಖಂಡಿ ಎಂಬುವವರು ಲಾರಿ ಚಾಲಕನ ವಿರುದ್ಧ ದೂರು ನೀಡಿದ್ದು, ಕಲಂ 281, 125 (ಎ) 125 (ಬಿ) 106 ಬಿ.ಎನ್.ಎಸ್ 2023 ಅಡಿ ಪ್ರಕರಣ ದಾಖಲಿಸಿಕೊಂಡ ಯಲ್ಲಾಪುರ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿತರಿಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಿದೆ.
ಎಸ್ಪಿ ನಾರಾಯಣ ಎಂ, ಹೆಚ್ಚುವರಿ ಪೊಲೀಸ ಅಧೀಕ್ಷಕ ಜಗದೀಶ ಎಮ್.ಎನ್, ಶಿರಸಿ ಪೊಲೀಸ ಉಪಾಧೀಕ್ಷಕ ಗಣೇಶ ಕೆ.ಎಲ್ ಹಾಗೂ ಯಲ್ಲಾಪುರ ಪೊಲೀಸ ನಿರೀಕ್ಷಕ ರಮೇಶ ಹನಾಪೂರ ರವರ ಮಾರ್ಗದರ್ಶನದಲ್ಲಿ, ಈ ಪ್ರಕರಣದಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಮಾನ್ಯ ಪೋಲಿಸ್ ಅಧೀಕ್ಷಕರು ಶ್ಲಾಘಿಸಿದ್ದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.