ಹಾವೇರಿ: ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಶಿಗ್ಗಾವಿ ಕ್ಷೇತ್ರ ಬಹುತೇಕ ಕಾಂಗ್ರೆಸ್ ತೆಕ್ಕೆಗೆ ಸೇರುವುದು ಖಚಿತವಾಗಿದೆ. ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ 2024ರ ಫಲಿತಾಂಶ ಬಹುತೇಕ ಹೊರಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ, ಅಲ್ಪಸಂಖ್ಯಾತ ನಾಯಕ ಯಾಸಿರ್ ಖಾನ್ ಪಠಾಣ್, ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ.
ಈ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ವಿರುದ್ಧ ಯಾಸಿರ್ ಖಾನ್ ಸತತ ಸೋಲುಗಳನ್ನು ಅನುಭವಿಸಿದ್ದರು. ಈ ಬಾರಿ ಮರಳಿ ಯತ್ನ ಎಂಬಂತೆ ಟಿಕೆಟ್ ಪಡೆದು ಕಣದಲ್ಲಿ ಪ್ರಬಲ ಸ್ಪರ್ಧೆ ಒಡ್ಡಿದ್ದು ಕೊನೆಗೂ ಬಿಜೆಪಿ ವಿರುದ್ಧ ಗೆದ್ದು ಬೀಗುವಲ್ಲಿ ಯಶಸ್ವಿಯಾಗಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಅಪ್ಪ ಬಸವರಾಜ ಬೊಮ್ಮಾಯಿ ವಿರುದ್ಧ ಸೋಲುಂಡರೂ ಇದೀಗ ಮಗ ಭರತ್ ಬೊಮ್ಮಾಯಿ ವಿರುದ್ಧ ಗೆದ್ದು ಕಾಂಗ್ರೆಸ್ ವಿಜಯ ಪತಾಕೆ ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿಗ್ಗಾವಿ ಕ್ಷೇತ್ರದ ಏಳನೇ ಸುತ್ತಿನ ಮತಎಣಿಕೆಯಿಂದಲೇ ಕಾಂಗ್ರೆಸ್‌ನ ಯಾಸಿರ್ ಖಾನ್ ಮುನ್ನಡೆ ಸಾಧಿಸಿಕೊಂಡು ಬಂದಿದ್ದು ಬೆಳಿಗ್ಗೆ 11:30ರ ವೇಳೆಗೆ 75,780 ಮತಗಳ ಅಂತರ ಕಾಯ್ದುಕೊಂಡಿದ್ದರು. ಬಿಜೆಪಿಯ ಭರತ್ ಬೊಮ್ಮಾಯಿ 67,784 ಮತಗಳಿಂದ ಹಿಂದುಳಿದಿದ್ದು ಈ ಮೂಲಕ ಯಾಸಿರ್ ಅವರಿಗೆ ಸುಮಾರು 9 ಸಾವಿರ ಮತಗಳ ಅಂತರದ ಗೆಲುವು ನಿಶ್ಚಿತ ಎನ್ನಲಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗಿದ್ದು ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.