ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಅಚ್ಚರಿ ಎನ್ನುವಂತೆ ಕಾಂಗ್ರೆಸ್ ಪಕ್ಷ ಮೂರೂ ಕ್ಷೇತ್ರಗಳಲ್ಲೂ ಗೆಲುವಿನ ನಗೆ ಬೀರಿದೆ. ಶಿಗ್ಗಾವಿ ಕ್ಷೇತ್ರದಲ್ಲಿ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್‌ನ ಯಾಸಿರ್ ಖಾನ್ ಪಠಾಣ್ ವಿಜಯ ಪತಾಕೆ ಹಾರಿಸಿದ್ದಾರೆ.
ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಂಗಾರು ಹನುಮಂತ ವಿರುದ್ಧ ಕಾಂಗ್ರೆಸ್‌ನ ಅನ್ನಪೂರ್ಣ ತುಕಾರಾಂ ಸುಮಾರು 9 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಕಾಂಗ್ರೆಸ್‌ನ ಅನ್ನಪೂರ್ಣ 93,051 ಮತಗಳನ್ನು ಪಡೆದು, 9,568 ಮತಗಳ ಅಂತದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಗೆಲುವು ದಾಖಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು 83,483 ಮತಗಳನ್ನು ಪಡೆಯುವ ಮೂಲಕ ಸೋಲುಂಡಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ಸುಮಾರು 9 ಸಾವಿರ ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದು ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.
ಇನ್ನು ತೀವ್ರ ಪೈಪೋಟಿಯ ಕ್ಷೇತ್ರ ಎಂದೇ ಬಿಂಬಿತವಾಗಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ ಬಹುತೇಕ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲ್ಲುವುದು ಖಚಿತವಾಗಿದೆ. ಅದರಲ್ಲೂ ಜೆಡಿಎಸ್ ಕಾಂಗ್ರೆಸ್ ನಡುವೆ ನೇರಾನೇರ ಹಣಾಹಣಿಯ ಕ್ಷೇತ್ರದಲ್ಲಿ ಕೊನೆಗೂ ಜೆಡಿಎಸ್ ನಾಯಕರಿಗೆ ಮತದಾರರು ಶಾಕ್ ನೀಡಿದ್ದಾರೆ.
ಮತ ಎಣಿಕೆಯ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್‌ನ ಸಿ.ಪಿ.ಯೋಗೇಶ್ವರ್ ಅಂತಿಮವಾಗಿ 99,073 ಮತಗಳನ್ನು ಪಡೆದಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕೇವಲ 73,328 ಮತಗಳನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ. ಈ ಮೂಲಕ ಸಿಪಿವೈ ಸುಮಾರು 25 ಸಾವಿರ ಮತಗಳ ಅಂತರದಲ್ಲಿ ಚೆನ್ನಪಟ್ಟಣ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದಾರೆ.