ಬೆಂಗಳೂರು: ಮದ್ಯ ವ್ಯರ್ಜನ ಶಿಬಿರಕ್ಕೆ ದಾಖಲಾಗಿದ್ದ ಯುವಕನೋರ್ವ ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಆತನ ಹೊಟ್ಟೆ ಸ್ಕ್ಯಾನ್ ಮಾಡಿದ ವೈದ್ಯರು ಶಾಕ್ ಆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಯುವಕನನ್ನು ಮಣಿಕಂಠ(26) ಎಂದು ಗುರುತಿಸಲಾಗಿದೆ.
ಕಳೆದ ಕೆಲ ವರ್ಷಗಳಿಂದ ಕುಡಿತದ ಚಟಕ್ಕೆ ದಾಸನಾಗಿದ್ದ ಮಣಿಕಂಠನನ್ನು ಮನೆಯವರು ಕುಡಿತ ಬಿಡಿಸಲು ತಿಂಗಳ ಹಿಂದೆ ಮದ್ಯ ವ್ಯರ್ಜನ ಶಿಬಿರಕ್ಕೆ ದಾಖಲಿಸಿದ್ದರು. ಈ ವೇಳೆ ಆತ ಪದೇ ಪದೇ ಹೊಟ್ಟೆನೋವೆಂದು ಹೇಳಿಕೊಂಡಿದ್ದು, ಮೊದಲು ಶಿಬಿರದಿಂದ ಹೊರಹೋಗಲು ನಾಟಕವಾಡುತ್ತಿರಬಹುದೆಂದು ಭಾವಿಸಿದ್ದ ಸಿಬ್ಬಂದಿ ಕೊನೆಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಬಳಿಕ ಆತನನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಲು ಮುಂದಾಗಿದ್ದರು.
ಈ ವೇಳೆ ಆತನನ್ನು ತಪಾಸಣೆ ಮಾಡಿದ ವೈದ್ಯರು ಹೊಟ್ಟೆಯ ಎಂಆರ್‌ಐ ಸ್ಕ್ಯಾನ್ ಮಾಡಿಸುವಂತೆ ಸಲಹೆ ನೀಡಿದ್ದರು. ಬಳಿಕ ಸ್ಕ್ಯಾನಿಂಗ್ ರಿಪೋರ್ಟ್ ನೋಡಿದ ವೈದ್ಯರು ಶಾಕ್ ಆಗಿದ್ದಾರೆ. ಮಣಿಕಂಠನ ಹೊಟ್ಟೆ.ಯಲ್ಲಿ ಟೂಥ್ ಬ್ರಷ್‌ಗಳು ಕಂಡುಬಂದಿದ್ದು, ಸಾಕಷ್ಟು ಇದ್ದ ಹಿನ್ನಲೆ ಕೂಡಲೇ ಆಪರೇಷನ್ ಮಾಡಲು ವೈದ್ಯರು ಮುಂದಾಗಿದ್ದರು. ಅದರಂತೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಆತನ ಹೊಟ್ಟೆಯಿಂದ 50ಕ್ಕೂ ಹೆಚ್ಚು ಬ್ರಷ್‌ಗಳನ್ನು ಹೊರತೆಗೆದಿದ್ದು, ಇದರೊಂದಿಗೆ ಕೆಲವು ಚಾಕೋಲೆಟ್ ಪೇಪರ್‌ಗಳು ಸಹ ಪತ್ತೆಯಾಗಿದೆ.
ಆಪರೇಷನ್ ಬಳಿಕ ಮಣಿಕಂಠನನ್ನು ಬ್ರಷ್ ಹೊಟ್ಟೆ ಸೇರಿದ ಕುರಿತು ವೈದ್ಯರು ವಿಚಾರಿಸಿದ್ದಾರೆ. ಈ ವೇಳೆ ಮಣಿಕಂಠ, ಮದ್ಯ ವ್ಯರ್ಜನ ಶಿಬಿರದಲ್ಲಿದ್ದಾಗ ಕುಡಿತ ಮಾಡಲಾಗದೇ ಉಂಟಾಗುತ್ತಿದ್ದ ಚಡಪಡಿಕೆಯಿಂದ ಶಿಬಿರದಲ್ಲಿದ್ದವರ ಟೂಥ್ ಬ್ರಷ್‌ಗಳನ್ನು ನುಂಗುತ್ತಿದುದಾಗಿ ಹೇಳಿಕೊಂಡಿದ್ದಾನೆ. ಇಡೀಯಾಗಿ ಬ್ರಷ್ ನುಂಗಲು ಸಾಧ್ಯವಿಲ್ಲದ ಹಿನ್ನಲೆ ಎರಡು ತುಂಡು ಮಾಡಿ ಬ್ರಷ್‌ಗಳನ್ನು ನುಂಗಿದ್ದು ಅದೃಷ್ಟವಶಾತ್ ಆತನ ಗಂಟಲು ಅಥವಾ ಇನ್ನಾವುದೇ ಭಾಗಗಳಿಗೆ ಹಾನಿಯಾಗಿಲ್ಲ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.