ಚನ್ನಪಟ್ಟಣ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 12 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲು ಮುಂದಾಗುತ್ತಿದೆ ಎಂದು ಬಿಜೆಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಆರೋಪಿಸಿದರು.
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ವಿರುಪಸಂದ್ರ ಗ್ರಾಮದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಮತಯಾಚನೆ ಮಾಡಿದ ಅವರು, ಸಿದ್ದರಾಮಯ್ಯನವರೇ 12 ಲಕ್ಷ ಬಿಪಿ ಎಲ್ ಕಾರ್ಡ್ ರದ್ದು ಮಾಡುವುದನ್ನು ತಕ್ಷಣವೇ ತಡೆಯಬೇಕು. ಇಲ್ಲದಿದ್ದರೆ ನಿಖಿಲ್ ಕುಮಾರಸ್ವಾಮಿ ಗೆದ್ದು ಬಂದು ವಿಧಾನ ಸಭೆಯಲ್ಲಿ ಘರ್ಜಿಸುತ್ತಾರೆ. ಬಡವರ ರೇಷನ್ ಕಾರ್ಡ್ ರದ್ದಾಗಿದೆಯೋ ಅದನ್ನು ವಾಪಾಸ್ ತರುವ ತಾಕತ್ತು ನಿಖಿಲ್ ಕುಮಾರಸ್ವಾಮಿಗೆ ಇದೆ ಎಂದು ಹೇಳಿದರು.
ಈ ಸರ್ಕಾರ ಏನು ಬೇಕಾದರೂ ಮಾಡಿಕೊಳ್ಳಲಿ. ಬಿಪಿಎಲ್ ಕಾರ್ಡ್ ರದ್ದಾದರೆ ನರೇಂದ್ರ ಮೋದಿಯವರು ಕೊಡುತ್ತಿರುವ 5 ಕೆಜಿ ಅಕ್ಕಿ, ಆಯುಷ್ಮಾನ್ ಭಾರತ್ ಯೋಜನೆ ಹಾಗೂ ಶಾಲಾ ಮಕ್ಕಳಿಗೆ ಕೊಡುವ ಯೋಜನೆಗಳು ರದ್ದಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಸರ್ಕಾರ ಎಂಥ ಸ್ಥಿತಿಗೆ ಬಂದಿದೆ. ಇವತ್ತು ಸಿದ್ದರಾಮಯ್ಯನವರ ಕೈಯಲ್ಲಿ ಅಧಿಕಾರ ಇಲ್ಲ. ಜಮೀರ್ ರವರು ಆಡಳಿತ ನಡೆಸುತ್ತಿದ್ದಾರೆ. ಈ ದೇಶದಲ್ಲಿ ಮುಸ್ಲಿಂ, ಹಿಂದೂ, ಕ್ರೈಸ್ತರು, ಜೈನರು, ಬೌದ್ಧರು ಎಲ್ಲರೂ ಒಟ್ಟಾಗಿ ಸೇರಿ ಬದುಕಬೇಕೆಂದು ಯೋಚನೆ ಮಾಡಿದವರು ನಾವು ಎಂದು ತಿಳಿಸಿದರು.
ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಬಡ ಸಾಮಾನ್ಯ ಮಹಿಳಾ ವರ್ಗದವರಿಗೆ ಬದುಕು ಕಟ್ಟಿ ಕೊಡುವಂಥ ಕೆಲಸ ಮಾಡಿದ್ದರು. ನಾನು ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ಸಾಮಾನ್ಯ ಜನರ ಭಾವನೆಯನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುವ ಶಕ್ತಿ ನಿಖಿಲ್ ಕುಮಾರಸ್ವಾಮಿಗೆ ಇದೆ ಎಂದು ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.