ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಮದುವೆಗೆ ಒಂದು ದಿನ ಮೊದಲು ಯುವತಿಯೊಬ್ಬಳು ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಶೈಮಾ (18) ಸಾವನ್ನಪ್ಪಿದ ಯುವತಿ.
ಶೈಮಾ ಕಳೆದ ಕೆಲವು ವರ್ಷಗಳಿಂದ 19 ವರ್ಷದ ನೆರೆಮನೆಯ ಸಜೀರ್ ಜೊತೆ ಸಂಬಂಧ ಹೊಂದಿದ್ದಳು. ಆದರೆ ಯುವತಿಯ ಮನೆಯವರಿಗೆ ಇದು ಇಷ್ಟವಿರಲಿಲ್ಲ. ಈ ಕಾರಣದಿಂದಾಗಿ, ಶೈಮಾ ಅವರ ಕುಟುಂಬವು ಮತ್ತೊಂದು ಸಂಬಂಧವನ್ನು ಹುಡುಕಿ ಮದುವೆಗೆ ಮುಂದಾಗಿದ್ದಾರೆ.
ಒಂದು ವಾರದ ಹಿಂದೆ ಬೇರೆ ಹುಡುಗನನ್ನು ನೋಡಿ, ಶೈಮಾಳೊಂದಿಗೆ ನಿಶ್ಚಿತಾರ್ಥ ಮಾಡಲಾಗಿತ್ತು. ಶೈಮಾಗೆ ಇದು ಇಷ್ಟವಾಗದಿದ್ದರೂ, ಶೈಮಾ ತನ್ನ ಕುಟುಂಬದ ಒತ್ತಡಕ್ಕೆ ಮಣಿದು ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಮದುವೆಗೆ ಕೇವಲ ಒಂದು ದಿನ ಬಾಕಿ ಇತ್ತು. ತನಗೆ ಇಷ್ಟವಾದ ಹುಡುಗನೊಂದಿಗಿನ ಸಂಬಂಧವನ್ನು ಒಪ್ಪಿಕೊಳ್ಳುವ ಬದಲು ಇನ್ನೊಬ್ಬ ಹುಡುಗನೊಂದಿಗೆ ಬಲವಂತವಾಗಿ ಮದುವೆಯನ್ನು ಏರ್ಪಡಿಸಿದ ಕುಟುಂಬದ ನಿರ್ಧಾರದಿಂದ ಬೇಸರಗೊಂಡಿದ್ದ ಶೈಮಾ, ಮದುವೆಗೆ ಒಂದು ದಿನ ಮೊದಲು ತನ್ನ ಚಿಕ್ಕಪ್ಪನ ಮನೆಯ ಟೆರೇಸ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಬಗ್ಗೆ ತಿಳಿದ ಶೈಮಾನ ಪ್ರಿಯಕರ ಸಜೀರ್ ಕೂಡ ಆತನ ಕೈಯನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದನು. ಆತನ ಕುಟುಂಬವು ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆತ ಅಪಾಯದಿಂದ ಪಾರಾಗಿದ್ದಾನೆ ಎಂದು ಹೇಳಲಾಗಿದೆ. ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.