ಭುವನೇಶ್ವರ: ಒಡಿಶಾದ ರೂರ್ಕೆಲಾದಲ್ಲಿ ಗೂಡ್ಸ್ ರೈಲೊಂದು ಹಳಿ ತಪ್ಪಿ ವಸತಿ ಪ್ರದೇಶಕ್ಕೆ ನುಗ್ಗಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಬೆಳಗಿನ ಜನದಟ್ಟಣೆಯ ಸಮಯದಲ್ಲಿ ಸಂಭವಿಸಿದ ಅಪಘಾತದಲ್ಲಿ, ಸರಕು ರೈಲಿನ ಎಲ್ಲಾ ಮೂರು ಬೋಗಿಗಳು ಹಳಿ ತಪ್ಪಿ, ಬಸಂತಿ ಕಾಲೋನಿಯನ್ನು ಪ್ರವೇಶಿಸಿದವು. ದೊಡ್ಡ ಸದ್ದು ಕೇಳಿ, ಕಾಲೋನಿಯ ಕೆಲವು ನಿವಾಸಿಗಳು ಭಯಭೀತರಾಗಿ ಓಡಿಹೋದರು. ಅದೃಷ್ಟವಶಾತ್ ರೈಲು ಯಾವುದೇ ಮನೆಗಳಿಗೆ ಡಿಕ್ಕಿಯಾಗದ ಪರಿಣಾಮ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಪಘಾತದಿಂದಾಗಿ, ರೈಲಿನ ಎಲ್ಲಾ ಮೂರು ಬೋಗಿಗಳು ಬಸಂತಿ ಕಾಲೋನಿಯಲ್ಲಿ ರಸ್ತೆಯ ಮಧ್ಯದಲ್ಲಿ ನಿಂತು ಸಂಚಾರ ಅಸ್ತವ್ಯಸ್ತಗೊಳಿಸಿತು. ರೈಲ್ವೆ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಸ್ವಲ್ಪ ಸಮಯದ ನಂತರ, ಅವರು ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ.
ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ವಾಹನಕ್ಕೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಘಟನೆಯಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.
ಸ್ಥಳೀಯರ ಆಕ್ರೋಶ: ಬಸಂತಿ ಕಾಲೋನಿಯ ನಿವಾಸಿಗಳು ಇಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂದು ಈ ಹಿಂದೆಯೇ ಆರೋಪಿಸಲಾಗಿದೆ. ಇಲ್ಲಿನ ನಿವಾಸಿಗಳನ್ನು ಹೇಗಾದರೂ ಖಾಲಿಮಾಡಿಸುವ ಉದ್ದೇಶದಿಂದ ರೈಲನ್ನು ಕಾಲೋನಿಯೊಳಕ್ಕೆ ನುಗ್ಗಿಸಲು ಪ್ರಯತ್ನ ಮಾಡಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.