ಸಾಗರ: ಆಟೋಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂವರು ಗಾಯಗೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ಹೊರವಲಯ ಬೊಮ್ಮತ್ತಿಯಲ್ಲಿ ನಡೆದಿದೆ. ಆಟೋ ಚಾಲಕ ರಾಘವೇಂದ್ರ(45), ಆಟೋ ಪ್ರಯಾಣಿಕ ಮಾಲತಿ(35) ಮೃತ ದುರ್ದೈವಿಗಳಾಗಿದ್ದಾರೆ.
ತಾಲ್ಲೂಕಿನ ಕಾರೇಹೊಂಡ ಗ್ರಾಮದ ಒಂದೇ ಕುಟುಂಬದ ರಾಮಪ್ಪ, ಮಾಲತಿ, ಮಕ್ಕಳಾದ ಕೃತಿಕಾ ಹಾಗೂ ಸಾನ್ವಿಕ ಆಟೋದಲ್ಲಿ ಸಾಗರಕ್ಕೆ ಬರುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಕಾರು ಆಟೋಗೆ ಡಿಕ್ಕಿಯಾಗಿದ್ದು, ಡಿಕ್ಕಿ ರಭಸಕ್ಕೆ ಆಟೋ ಸಂಪೂರ್ಣ ನುಜ್ಜುಗುಜ್ಜಾಗಿದೆ.
ಡಿಕ್ಕಿ ರಭಸಕ್ಕೆ ಆಟೋ ಚಲಾಯಿಸುತ್ತಿದ್ದ ಚಾಲಕ ಹಾಗೂ ಹಿಂದೆ ಕುಳಿತಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದಂತೆ ರಾಮಪ್ಪ, ಮಕ್ಕಳಾದ ಕೃತಿಕಾ, ಸಾನ್ವಿಕಾಗೆ ಗಾಯಗಳಾಗಿದ್ದು, ಮೂವರನ್ನೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹಬ್ಬದ ಖರೀದಿಗೆಂದು ಕುಟುಂಬಸ್ಥರು ಸಾಗರಕ್ಕೆ ತೆರಳುತ್ತಿದ್ದರು ಎನ್ನಲಾಗಿದ್ದು, ಸಾಗರ ಪಟ್ಟಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.