ಭಟ್ಕಳ: ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆಮಾಡಿದೆ. ಎಲ್ಲೆಡೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ನಡೆಯುತ್ತಿದ್ದು ಕನ್ನಡಾಂಬೆಗೆ ಪುಷ್ಪಗಳನ್ನು ಅರ್ಪಿಸಿ ಗೌರವ ಸಲ್ಲಿಸಲಾಗುತ್ತಿದೆ. ಆದರೆ ಭಟ್ಕಳ ತಾಲ್ಲೂಕಿನ ಜಾಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಕನ್ನಡಾಂಬೆಗೆ ಅಗೌರವ ತೋರಿದ್ದಾರೆ.
ಶುಕ್ರವಾರ ಭಟ್ಕಳ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ ತಾಲ್ಲೂಕು ಪಂಚಾಯತ್, ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತ್ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಸಹಾಯಕ ಆಯುಕ್ತೆ ಡಾ.ನಯನಾ ಧ್ವಜಾರೋಹಣ ನೆರವೇರಿಸಿದ್ದು ಬಳಿಕ ಸಭಾ ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ವೇದಿಕೆ ಮೇಲಿದ್ದ ಗಣ್ಯರು ಪುಷ್ಪಗಳನ್ನು ಅರ್ಪಿಸಿದರು.
ಈ ವೇಳೆ ಜಾಲಿ ಪಟ್ಟಣ ಪಂಚಾಯತ ಅಧ್ಯಕ್ಷೆ ಖಾಜೀಯಾ ಅಫ್ಸಾ ಹುಜೈಫಾ ಅವರಿಗೂ ಭುವನೇಶ್ವರಿ ದೇವಿಗೆ ಫೋಟೋಗೆ ಪುಷ್ಪಗಳನ್ನು ಅರ್ಪಿಸುವಂತೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಪುಷ್ಪ ತಿಳಿಸಿದ್ದಾರೆ. ಆದರೆ ಅಧ್ಯಕ್ಷೆ ಖಾಜಿಯಾ ಪುಷ್ಪ ನಮನ ಸಲ್ಲಿಸಲು ನಿರಾಕರಿಸಿದ್ದಾರೆ. ಬಳಿಕ ಸಹಾಯಕ ಆಯುಕ್ತೆ ಡಾ.ನಯನಾ ಸೂಚಿಸಿದರೂ ಕೂಡಾ ಪುಷ್ಪಗಳನ್ನು ಅರ್ಪಿಸಲು ನಿರಾಕರಿಸಿ ಆ ಗೌರವ ತೋರಿಸಿದ್ದಾರೆ.
ಕರ್ನಾಟಕದಲ್ಲೇ ಹುಟ್ಟಿ, ಕರ್ನಾಟಕದ ಸೌಲಭ್ಯ ಪಡೆದು, ಕನ್ನಡಿಗರಿಂದಲೇ ಆಯ್ಕೆಯಾದ ಜನಪ್ರತಿನಿಧಿಯ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.