ಮಂಡ್ಯ: ದೇವಸ್ಥಾನದ ಗೇಟ್ ಬಿದ್ದು ಮಗು ಸಾವನ್ನಪ್ಪಿರುವ ಮನಕಲಕುವ ಘಟನೆ ಮಂಡ್ಯದ ಹುಂಜನಕೆರೆ ಗ್ರಾಮದ ಚನ್ನಕೇಶವ ದೇಗುಲದಲ್ಲಿ ನಡೆದಿದೆ. ಹೆಚ್.ಎಸ್.ಜಿಷ್ಣು(5) ಮೃತ ದುರ್ದೈವಿ ಮಗು ಎಂದು ತಿಳಿದು ಬಂದಿದೆ.
ನಿನ್ನೆ ಕಾರ್ತಿಕ ಮಾಸದ ಸೋಮವಾರ ಹಿನ್ನೆಲೆ ಕುಟುಂಬದೊಂದಿಗೆ ಮಗು ದೇಗುಲಕ್ಕೆ ತೆರಳಿತ್ತು. ದೇವಸ್ಥಾನದ ಗೇಟ್ ಬಳಿ ಮಗು ಆಟವಾಡಿಕೊಂಡಿದ್ದು, ಈ ವೇಳೆ ಏಕಾಏಕಿ ದೇವಸ್ಥಾನದ ಗೇಟ್ ಬಿದ್ದು ತೀವ್ರ ಗಾಯಗೊಂಡಿದೆ. ತಕ್ಷಣ ಪೋಷಕರು ಮಗುವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಗಂಭೀರ ಗಾಯಗೊಂಡಿದ್ದ ಮಗು ಜಿಷ್ಣು ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಸಾವನ್ನಪ್ಪಿದೆ.
ಚನ್ನಕೇಶವ ದೇಗುಲ ಗೇಟ್ ಮುರಿದು ಬಹಳ ದಿನಗಳಾದ್ರೂ ದುರಸ್ಥಿ ಮಾಡದೇ ಮುಜರಾಯಿ ಇಲಾಖೆ ನಿರ್ಲಕ್ಷ್ಯ ತೋರಿದೆ. ಹೀಗಾಗಿ ಮುಜರಾಯಿ ಇಲಾಖೆ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.