ಬೆಂಗಳೂರು: ಮಹಾಲಿಂಗೇಶ್ವರ ಸೇವಾ ಟ್ರಸ್ಟ್‌ನಿಂದ ಶಿಶುಗೃಹ ಪೂರ್ಣಪ್ರಜ್ಞ ಆಟದ ಮೈದಾನದಲ್ಲಿ ವಿಜ್ರಂಭಣೆಯಿಂದ ಮಹಾಶಿವರಾತ್ರಿಯನ್ನು ಆಚರಿಸಲಾಯಿತು. ಬಂಗಾರದ ಗೋಪುರಗಳ ಮಾದರಿಯ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶಿವನ ಲಿಂಗಕ್ಕೆ ಪ್ರಾಣ ಪತ್ರಿಷ್ಠಾಪನೆ ನೆರವೇರಿಸಿ ವಿಶೇಷ ಪೂಜೆ, ಹೋಮ, ಹವನ, ರುದ್ರಾಭಿಷೇಕ ಹಾಗೂ ರುದ್ರಪಾರಾಯಣ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಪವಿತ್ರ ಪ್ರಯಾಗ್‌ರಾಜ್ ನ ತ್ರಿವೇಣಿ ಸಂಗಮದ ಪವಿತ್ರ ಜಲ ಪ್ರೋಕ್ಷಣೆಯ ಮೂಲಕ ಭಕ್ತಾದಿಗಳಿಗೆ ವಿಶೇಷವಾದ ಅನುಭೂತಿಯನ್ನು ನೀಡುವುದು ನಮ್ಮ ಉದ್ದೇಶವಾಗಿತ್ತು. ಈ ಹಿನ್ನಲೆಯಲ್ಲಿ ತ್ರಿವೇಣಿ ಸಂಗಮದಿಂದ ತಂದ ನೀರನ್ನು ಬಂದ ಭಕ್ತಾದಿಗಳ ಮೇಲೆ ಪ್ರೋಕ್ಷಣೆ ಮಾಡಲಾಯಿತು.
24 ಗಂಟೆಗಳ ಕಾಲವೂ ನಿರಂತರವಾಗಿ ಸಿರಿಧಾನ್ಯದಿಂದ ತಯಾರಿಸಿದ ಸಾತ್ವಿಕ ಪ್ರಸಾದವನ್ನು ವಿತರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಸಾವಿರಾರು ಭಕ್ತರು ಈ ಉತ್ಸವದಲ್ಲಿ ಪಾಲ್ಗೊಂಡಿದ್ದು ಸಂತಸ ತಂದಿದೆ ಎಂದು ಟ್ರಸ್ಟ್‌ನ ಬೆಳ್ಳಿಪಾಡಿ ಗುಣರಂಜನ್ ಶೆಟ್ಟಿ ತಿಳಿಸಿದರು.