ಶಿರಸಿ: ರಸ್ತೆಯಲ್ಲಿ ತೆರಳುತ್ತಿದ್ದ ಯುವತಿಯ ಕೈಹಿಡಿದು ಎಳೆದು ಯುವಕನೋರ್ವ ಅಸಭ್ಯ ವರ್ತನೆ ತೋರಿರುವ ಘಟನೆ ತಾಲ್ಲೂಕಿನ ಬಿಸಲಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಆನಗೋಡಕೊಪ್ಪದಲ್ಲಿ ನಡೆದಿದೆ. ರಸ್ತೆಯಲ್ಲಿ ಯುವತಿ ನಡೆದು ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಯುವಕ ಆಕೆಯ ಕೈಹಿಡಿದು ಎಳೆದಾಡಿದ್ದ.
ಈ ವೇಳೆ ಯುವತಿ ಜೋರಾಗಿ ಕೂಗಿಕೊಂಡಿದ್ದು, ಸಮೀಪದಲ್ಲಿದ್ದ ಗ್ರಾಮಸ್ಥರು ಕೂಡಲೇ ಯುವತಿ ಇದ್ದಲ್ಲಿಗೆ ಓಡಿಬಂದಿದ್ದಾರೆ. ಜನರು ಬರುತ್ತಿದ್ದಂತೆ ಯುವಕ ಬೈಕ್ ಬಿಟ್ಟು ಪರಾರಿಯಾಗಿದ್ದು, ಸ್ಥಳದಲ್ಲಿ ಜಮಾಯಿಸಿದ ಗ್ರಾಮಸ್ಥರು ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಯುವಕನಿಗಾಗಿ ಸುತ್ತಮುತ್ತ ಹುಡುಕಾಟ ನಡೆಸಿದ್ದು ಬಳಿಕ ಯುವಕ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಪಕ್ಕದ ಹಾವೇರಿ ಜಿಲ್ಲೆ ಮೂಲದ ಯುವಕ ಕಟ್ಟಡ ನಿರ್ಮಾಣ ಕೆಲಸಕ್ಕೆಂದು ಪಕ್ಕದ ಬಾಳೆಕೊಪ್ಪ ಗ್ರಾಮಕ್ಕೆ ಆಗಮಿಸಿದ್ದ. ಈ ವೇಳೆ ಒಬ್ಬಂಟಿ ಯುವತಿಯನ್ನು ಕಂಡು ಅನುಚಿತ ವರ್ತನೆ ತೋರಿದ್ದು ಗ್ರಾಮಸ್ಥರು ಯುವಕನಿಗೆ ಧರ್ಮದೇಟು ನೀಡಿ ಬುದ್ದಿ ಹೇಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.