ಕಾರವಾರ: ಸದ್ಯ ಸಾರಿಗೆ ಬಸ್‌ಗಳ ದರ ಏರಿಕೆ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಪ್ರಯಾಣಿಕರಿಂದಲೂ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಇದರ ನಡುವೆ ಇಲ್ಲೊಂದು ಕಡೆ ಪ್ರಯಾಣಿಕರಿಗೆ ಬಿಟ್ಟಿರುವ ಬಸ್‌ನಲ್ಲಿ ಸೀಟುಗಳನ್ನು ತೆಗೆದು ಬಿಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಉತ್ತರಕನ್ನಡ ಜಿಲ್ಲೆಯ ಶಿರಸಿಯಿಂದ ಕದಂಬರ ನಾಡು ಎಂದೇ ಪ್ರಖ್ಯಾತಿ ಪಡೆದಿರುವ ಬನವಾಸಿಗೆ ಬಿಡಲಾದ ಗ್ರಾಮೀಣ ಸಾರಿಗೆ ಬಸ್ಸಿನಲ್ಲಿ 5-6 ಸೀಟುಗಳನ್ನೇ ತೆಗೆದು ಬಿಡಲಾಗಿದ್ದು, ಇದರಿಂದ ಪ್ರಯಾಣಿಕರು ನೆಲದ ಮೇಲೆ ಕುಳಿತು ಪ್ರಯಾಣಿಸಬೇಕಾದ ದುರ್ದೈವ ಎದುರಾಗಿದೆ.
ಕನಿಷ್ಠ ಐದರಿಂದ ಆರು ಸೀಟುಗಳನ್ನು ತೆಗೆದಿರುವ ಬಸ್ ನ್ನು ಬನವಾಸಿಗೆ ಬಿಟ್ಟಿದ್ದಾರೆ. ಇದರ ಪರಿಣಾಮ ಮಹಿಳೆಯರು ದಯನೀಯವಾಗಿ ಕೆಳಗೆ ಕುಳಿತು ಪ್ರಯಾಣಿಸಬೇಕಾದ ಪರಿಸ್ಥಿತಿ ಬಂದಿದೆ ಎಂದರೆ ಕೆಎಸ್ಆರ್‌ಟಿಸಿ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದು ಜನರು ಆಡಿಕೊಳ್ಳುವಂತಾಗಿದೆ.
ಕಳೆದ 15 ದಿನಗಳಿಂದ ಇದೇ ಬಸ್ಸನ್ನು ಬನವಾಸಿ ಭಾಗಕ್ಕೆ ಬಿಡುತ್ತಿದ್ದು, ಪ್ರತಿನಿತ್ಯ ಪ್ರಯಾಣಿಕರಿಂದಲೇ ತುಂಬಿ ತುಳುಕುವ ಬಸ್‌ನಲ್ಲಿ ಸೀಟುಗಳು ಇಲ್ಲದಿರುವುದು ಪ್ರಯಾಣಿಕರಿಗೆ ಸಂಕಷ್ಟ ಉಂಟುಮಾಡಿದೆ. ಈ ಬಗ್ಗೆ ಕೇಳಿದರೆ ಯಾವುದೇ ಅಧಿಕಾರಿಗಳು ಪ್ರತಿಕ್ರಿಯೆ ನೀಡಿಲ್ಲವಾಗಿದ್ದು, ಶಾಸಕರು ಈ ಬಗ್ಗೆ ಗಮನಹರಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.