ಬೆಂಗಳೂರು: ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ-ಬಿ) ನ 29 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಹುಟ್ಟುಹಬ್ಬವನ್ನು ಸ್ನೇಹಿತರೊಂದಿಗೆ ಆಚರಿಸಿದ ಮರುದಿನ ಮುಂಜಾನೆ ಹಾಸ್ಟೆಲ್ ಆವರಣದಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ.
ಗುಜರಾತ್‌ನ ಎರಡನೇ ವರ್ಷದ ಸ್ನಾತಕೋತ್ತರ ಪ್ರೋಗ್ರಾಮ್(ಪಿಜಿಪಿ) ವಿದ್ಯಾರ್ಥಿ ನಿಲೇ ಕೈಲಾಶ್ಬಾಯ್ ಪಟೇಲ್ ಇತ್ತೀಚೆಗೆ ಫ್ಯಾಶನ್ ಇ-ಕಾಮರ್ಸ್ ಸಂಸ್ಥೆಯಲ್ಲಿ ಉದ್ಯೋಗವನ್ನು ಪಡೆದುಕೊಂಡಿದ್ದರು. ಸೋಮವಾರ ಕೆಲಸಕ್ಕಾಗಿ ತೆರಳಬೇಕಾಗಿತ್ತು. ಆದರೆ ಅಷ್ಟರಲ್ಲೇ ಆತನ ಹಠಾತ್ ಸಾವು ಕ್ಯಾಂಪಸ್‌ನ ವಿದ್ಯಾರ್ಥಿಗಳಿಗೆ ಆಘಾತಕ್ಕೀಡುಮಾಡಿದೆ.
ಭದ್ರತಾ ಸಿಬ್ಬಂದಿ ಬೆಳಿಗ್ಗೆ 6.30ರ ಸುಮಾರಿಗೆ ಹಾಸ್ಟೆಲ್ ಲಾನ್ ಮೇಲೆ ವಿದ್ಯಾರ್ಥಿ ಪಟೇಲ್ ಪ್ರಜ್ಞಾಹೀನರಾಗಿರುವುದನ್ನು ಕಂಡು ಕೂಡಲೇ ಹಿರಿಯ ಸಿಬ್ಬಂದಿಗೆ ಮಾಹಿತಿ ನೀಡಿದರು. ವೈದ್ಯಕೀಯ ತಂಡದ ತಕ್ಷಣದ ಆಗಮಿಸಿ ಆತನನ್ನು ಬದುಕಿಸಲು ಪ್ರಯತ್ನಿಸಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ರಾತ್ರಿ ತನ್ನ ಕೋಣೆಗೆ ತೆರಳುತ್ತಿದ್ದಾಗ ಪಟೇಲ್ ಆಕಸ್ಮಿಕವಾಗಿ ಹಾಸ್ಟೆಲ್ ಕಟ್ಟಡದ ಎರಡನೇ ಮಹಡಿಯಿಂದ ಬಿದ್ದಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಶಂಕೆ ವ್ಯಕ್ತವಾಗಿದೆ. ಅಧಿಕಾರಿಗಳು ಅವನ ದೇಹದ ಮೇಲೆ ಸಣ್ಣ ಪುಟ್ಟ ಗಾಯಗಳನ್ನು ಗಮನಿಸಿದ್ದು ಆದರೆ ಜಗಳವಾಗಿದ್ದನ್ನು ಸೂಚಿಸುವ ಯಾವುದೇ ಗಮನಾರ್ಹ ಗಾಯಗಳಿಲ್ಲ. ಡೆತ್ ನೋಟ್ ಅಥವಾ ಇತರೆ ಸಾಕ್ಷ್ಯಗಳಂತಹ ಆತ್ಮಹತ್ಯೆಯ ಯಾವುದೇ ಸೂಚನೆಗಳಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಮತ್ತು ಆತ ಯಾವುದೇ ತೊಂದರೆ ಇರುವ ಕುರಿತು ಹೇಳಿಕೊಂಡಿರಲಿಲ್ಲ ಎಂದು ಅವರ ಸ್ನೇಹಿತರು ದೃಢಪಡಿಸಿದ್ದಾರೆ ಎನ್ನಲಾಗಿದೆ.
ಹಾಸ್ಟೆಲ್ ಸದಸ್ಯರ ಪ್ರಕಾರ, ಪಟೇಲ್ ತನ್ನ ಜನ್ಮದಿನವನ್ನು ಸ್ನೇಹಿತರ ಸಣ್ಣ ಗುಂಪಿನೊಂದಿಗೆ ಆಚರಿಸಿ ಸಂಜೆ ಕಳೆದಿದ್ದರು. ಅವರ ಸಾವಿಗೆ ಕಾರಣವಾದ ನಿಖರವಾದ ಸಂದರ್ಭಗಳು ಅಸ್ಪಷ್ಟವಾಗಿವೆ. ಅಧಿಕೃತ ಪ್ರಕರಣ ದಾಖಲಿಸುವ ಮುನ್ನ ಗುಜರಾತ್ನಿಂದ ಅವರ ಕುಟುಂಬದ ಆಗಮನಕ್ಕಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.