ಕಾರವಾರ: ಅಂಕೋಲಾ ತಾಲ್ಲೂಕಿನ ಶಿರೂರು ಗುಡ್ಡಕುಸಿತ ದುರಂತದಲ್ಲಿ ಕಣ್ಮರೆಯಾಗಿದ್ದ ಜಗನ್ನಾಥ ನಾಯ್ಕ ಹಾಗೂ ಲೋಕೇಶ ಕುಟುಂಬಸ್ಥರಿಗೆ ಸರ್ಕಾರದ ವತಿಯಿಂದ ಪರಿಹಾರ ನೀಡಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ನಡೆದ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ಎಸ್ ವೈದ್ಯ ತಲಾ 5 ಲಕ್ಷದ ಪರಿಹಾರದ ಚೆಕ್‌ನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದರು.
ಕಳೆದ ಜುಲೈ 16 ರಂದು ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಬಳಿ ಗುಡ್ಡಕುಸಿತ ದುರಂತ ಸಂಭವಿಸಿದ್ದು, 11 ಮಂದಿ ಕಣ್ಮರೆಯಾಗಿದ್ದರು. ಈ ಪೈಕಿ ಒಂದು ವಾರದ ಅಂತರದಲ್ಲಿ ಹೆದ್ದಾರಿಯಂಚಿಗೆ ಹೊಟೇಲ್ ನಡೆಸುತ್ತಿದ್ದ ಲಕ್ಷ್ಮಣ ನಾಯ್ಕ, ಆತನ ಪತ್ನಿ ಶಾಂತಿ ನಾಯ್ಕ, ಮಕ್ಕಳಾದ ಅವಂತಿಕಾ, ರೋಷನ್ ಮೃತದೇಹಗಳು ಪತ್ತೆಯಾಗಿದ್ದವು.
ಬಳಿಕ ಉಳುವರೆ ಗ್ರಾಮದ ಸಣ್ಣೀ ಗೌಡ, ಲಾರಿ ಚಾಲಕರುಗಳಾದ ತಮಿಳುನಾಡು ಮೂಲದ ಚಿಣ್ಣನ್, ಮುರುಗನ್ ಹಾಗೂ ಶರವಣನ್ ಮೃತದೇಹಗಳು ಪತ್ತೆಯಾಗಿದ್ದು, 8 ಮಂದಿಯ ಮೃತದೇಹ ಪತ್ತೆಯಾದಂತಾಗಿತ್ತು. ಆದರೆ ಕೇರಳದ ಲಾರಿ ಚಾಲಕ ಅರ್ಜುನ್, ಸ್ಥಳೀಯರಾದ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಮೃತದೇಹಗಳು ಸಿಕ್ಕಿರಲಿಲ್ಲ. ಮೂರು ಹಂತಗಳ ಕಾರ್ಯಾಚರಣೆಯ ಸುಮಾರು 70 ದಿನಗಳ ಬಳಿಕ ಕೇರಳದ ಅರ್ಜುನ್ ಶವ ಲಾರಿಯೊಂದಿಗೆ ಸಿಕ್ಕಿತ್ತು.
ಆದರೆ ಜಗನ್ನಾಥ ನಾಯ್ಕ ಹಾಗೂ ಲೋಕೇಶ ಮೃತದೇಹಗಳು ಮಾತ್ರ ಮೂರು ಹಂತಗಳಲ್ಲಿ ಕಾರ್ಯಾಚರಣೆ ನಡೆದರೂ ಸಹ ಸಿಕ್ಕಿಲ್ಲವಾಗಿದ್ದು, ನದಿಯಲ್ಲಿ ಎರಡು ಮೂಳೆಗಳು ಸಿಕ್ಕಿದ್ದವಾದರೂ ಡಿಎನ್‌ಎ ಹೊಂದಾಣಿಕೆ ಪರೀಕ್ಷೆಯಲ್ಲಿ ಸೂಕ್ತ ಫಲಿತಾಂಶ ಬರದ ಹಿನ್ನಲೆ ಪರಿಹಾರ ಕಾರ್ಯ ವಿಳಂಬವಾಗಿತ್ತು. ಇದೀಗ ಸರ್ಕಾರದ ನಿಯಮಗಳ ಪ್ರಕಾರ ಕಣ್ಮರೆಯಾದವರನ್ನು ಮೃತರೆಂದು ಘೋಷಿಸಿ ಸರ್ಕಾರದಿಂದ ಪರಿಹಾರ ಘೋಷಿಸಿದ್ದು, ಕುಟುಂಬಸ್ಥರಿಗೆ ಪರಿಹಾರದ ಆದೇಶ ಪ್ರತಿಯನ್ನು ಹಸ್ತಾಂತರಿಸಲಾಗಿದೆ.