ಕಾರವಾರ: ಅಂಬೇಡ್ಕರ್ ಅವರು ಕರೆ ನೀಡಿದ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಸಂದೇಶ ರಾಜ್ಯದ ಮೂಲೆ ಮೂಲೆಯಲ್ಲಿರುವ ದಲಿತರ ಎದೆಗೆ ತಲುಪಬೇಕು ಎಂದು ಕರ್ನಾಟಕ ದಲಿತ ಕಲಾ ಮಂಡಳಿ ಸಂಚಾಲಕ ಪಿಚ್ಚಳ್ಳಿ ಶ್ರೀನಿವಾಸ ಹೇಳಿದರು.
ಉತ್ತರ ಕನ್ನಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ನೌಕರರ ಒಕ್ಕೂಟದ ವತಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ರವರ ಶಿಕ್ಷಿತರಾಗಿ, ಸಂಘರ್ಷಿತರಾಗಿ, ಸಂಘಟಿತರಾಗಿ ಚಾರಿತ್ರಿಕ ಘೋಷಣೆಗಳ ಶತಮಾನೋತ್ಸವ ಜಾಗೃತಿ ಅಭಿಯಾನ ಹಾಗೂ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಡೀ ಪ್ರಪಂಚವೇ ಇಂದು ಅಂಬೇಡ್ಕರ್ ಕಡೆ ನೋಡುತ್ತಿದೆ. ಆದರೆ ಆ ಅಂಬೇಡ್ಕರ್ ಕುರಿತಾದ ಅರಿವು ನಾವು ತೆಗೆದುಕೊಳ್ಳಲು 50 ವರ್ಷ ಬೇಕಾಯಿತು. ಮಹಾರಾಷ್ಟ್ರ ಸರ್ಕಾರ ಗಟ್ಟಿ ಮನಸ್ಸು ಮಾಡಿ ಅಂಬೇಡ್ಕರ್ ವಿಚಾರ ದೇಶಕ್ಕೆ ಹಂಚಿದ್ದಕ್ಕೆ ಧನ್ಯವಾದಗಳು ಎಂದರು.
ದಲಿತರ ಮನೆಯಲ್ಲಿ ಫ್ರಿಡ್ಜ್, ಟಿವಿ, ಬಂಗಾರ ಇಲ್ಲದಿದ್ದರೂ ಬೇಸರ ಪಡಬೇಕಾಗಿಲ್ಲ. ಆದರೆ ಅಂಬೇಡ್ಕರ್ ಪುಸ್ತಕ, ವಿಚಾರಧಾರೆ ಇಟ್ಟುಕೊಳ್ಳಿ. ಅವರೇ ನಮಗೆ ಚಿನ್ನ, ವಜ್ರ ಇದ್ದಂತೆ. ಅಂಬೇಡ್ಕರ್ ಇಲ್ಲದೇ ಇದ್ದಿದ್ದರೆ ನಮ್ಮ ಬದುಕು ಇರುತ್ತಿರಲಿಲ್ಲ. ಈ ಹಿನ್ನಲೆಯಲ್ಲಿ ಅವರೇ ನಮ್ಮ ದೇವರಿದ್ದಂತೆ ಎಂದರು.
ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಅಂಬೇಡ್ಕರ್ ತಿಳಿಯದ ವಿಚಾರವಿಲ್ಲ. ತಾನು ಅಂದುಕೊಂಡಂತೆ ಆಗಲಿಲ್ಲ ಎನ್ನುವ ಕಾರಣಕ್ಕೆ ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟರು. ಅಂಬೇಡ್ಕರ್ ಕೊಟ್ಟ ಶಿಕ್ಷಣ ಸಂಘಟನೆ, ಹೋರಾಟದ ಫಲವಾಗಿ ಕಳೆದ 24 ವರ್ಷದಿಂದ ಇಡೀ ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಹೋರಾಟದ ಕಿಚ್ಚು ಹತ್ತಿಸಿದೆ ಎಂದರು.
ದಲಿತ ಚಳುವಳಿಯ ಕಿಚ್ಚು ಮುಂದುವರೆಸಬೇಕು. ಇದಕ್ಕೆ ದಲಿತ ನೌಕರರು ಕಣ್ಣಾಗಬೇಕು. ಸಮಾಜದಲ್ಲಿ ನಾವು ಉತ್ತಮವಾಗಿ ಬದುಕಬೇಕಾದರೆ ಅಂಬೇಡ್ಕರ್ ಸಮಾಜಕ್ಕೆ ಕೊಟ್ಟ ಮೂರು ಮುತ್ತಿನ ಸೂತ್ರಗಳಾದ ಶಿಕ್ಷಣ ಸಂಘಟನೆ ಹೋರಾಟವನ್ನ ಪಾಲಿಸೋಣ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಮಾತನಾಡಿ ಅಂಬೇಡ್ಕರ್ ರವರು ಬರೆದ ಸಂವಿಧಾನ ರಕ್ಷಣೆ ನಮ್ಮ ರಕ್ಷಣೆ. ಆದರೆ ಇದೇ ಸಂವಿಧಾನದ ಶಕ್ತಿಯಿಂದ ಜನಪ್ರತಿನಿಧಿಯಾಗಿ ಆಯ್ಕೆಯಾದ ಕೆಲವರು ಅಂಬೇಡ್ಕರ್ ಸಂವಿಧಾನ ಬರೆದಿಲ್ಲ ಅನ್ನುತ್ತಿದ್ದಾರೆ. ಇಡೀ ದೇಶದ ಜನರ ಶ್ರೇಷ್ಠ ಗ್ರಂಥ ಅಂಬೇಡ್ಕರ್ ಬರೆದ ಸಂವಿಧಾನ ಎಂದರು. ಅಂಬೇಡ್ಕರ್ ಅವರ ಶ್ರಮದಿಂದ ನೌಕರರಾದವರು ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಹಳ್ಳಿಗೆ ತಲುಪಿಸಬೇಕು. ಈ ಮೂಲಕ ಸಮಾಜವನ್ನ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಜಾನಪದ ಕಲಾವಿದ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ ನಮ್ಮ ಮುಂದಿನ ಪೀಳಿಗೆ ಅಂಬೇಡ್ಕರ್ ಅವರ ವಿಚಾರಧಾರೆ ತಿಳಿಸುವ ಅಗತ್ಯವಿದೆ. ಕಾರವಾರದಲ್ಲಿ ನಡೆದಂತೆ ಅಂಬೇಡ್ಕರ್ ಅವರ ಚಾರಿತ್ರಿಕ ಘೋಷಣೆಯ ನೂರು ವರ್ಷದ ಕಾರ್ಯಕ್ರಮ ಇಡೀ ರಾಜ್ಯಕ್ಕೆ ಮಾದರಿಯಾಗಲಿ. ರಾಜ್ಯದ ಮೂಲೆ ಮೂಲೆಯಲ್ಲಿ ಇಂತಹ ಕಾರ್ಯಕ್ರಮ ನಡೆಯುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ, ನಗರಸಭೆ ಆಯುಕ್ತ ಜಗದೀಶ್ ಹುಲಗೆಜ್ಜಿ, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜಿನಿಯರ್ ರವಿಕುಮಾರ್, ಸಂಘಟನೆಯ ಅಧ್ಯಕ್ಷ ಜಿ.ಡಿ ಮನೋಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನ ಸಂಘಟನೆಯ ಗಣೇಶ್ ಬಿಷ್ಟಣ್ಣನವರ್ ನೆರವೇರಿಸಿದರು.