ಮುಧೋಳ್: ಮುಂದೆ ಬರುತ್ತಿದ್ದ ಬೈಕ್ ಅನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿ ಬೈಕ್ ನಲ್ಲಿದ್ದ ದಂಪತಿ ಸಾವನ್ನಪ್ಪಿದ್ದಾರೆ. ಮುಗಳಖೋಡ್ ಗ್ರಾಮದ ಬಳಿ ಶನಿವಾರ ಈ ಅಪಘಾತ ಸಂಭವಿಸಿದೆ.
ಅಮಾವಾಸ್ಯೆ ಪೂಜೆಗೆ ಬೈಕ್ ನಲ್ಲಿ ತಮ್ಮ ಜಮೀನಿಗೆ ಹೋಗಿದ್ದ ದಂಪತಿ ಊರಿಗೆ ಮರಳುತ್ತಿದ್ದಾಗ ಇಚಲಕರಂಜಿಯಿಂದ ಯಾದಗಿರಿಗೆ ತೆರಳುತ್ತಿದ್ದ ಚಿಕ್ಕೋಡಿ ಘಟಕಕ್ಕೆ ಸೇರಿದ ಬಸ್ ಡಿಕ್ಕಿ ಹೊಡೆದಿದೆ. ಶಂಕರಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಶ್ರೀದೇವಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದರು.
ಮೃತರನ್ನು ಶಂಕರಪ್ಪ ಲಕ್ಷ್ಮೇಶ್ವರ (55) ಮತ್ತು ಅವರ ಪತ್ನಿ ಶ್ರೀದೇವಿ ಲಕ್ಷ್ಮೇಶ್ವರ (45) ಎಂದು ಗುರುತಿಸಲಾಗಿದೆ.
ರಸ್ತೆಯ ಬದಿಯಲ್ಲಿ ಸ್ವಾಗತ ಕಮಾನು ಡಿಕ್ಕಿ ಹೊಡೆದ ನಂತರ ಬಸ್ ಪಲ್ಟಿಯಾಗಿದ್ದು, ಬಸ್ನಲ್ಲಿದ್ದ 40-45 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಮುಧೋಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಧೋಳ ಸಿಪಿಐ ಮಹಾದೇವ ಶಿರಹಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.