ಬೆಂಗಳೂರು: ಇಂಡಿಗೋ, ವಿಸ್ತಾರಾ, ಏರ್ ಇಂಡಿಯಾ ಮತ್ತು ಆಕಾಶ್ ಏರ್ ಸೇರಿದಂತೆ 20ಕ್ಕೂ ಹೆಚ್ಚು ಭಾರತೀಯ ವಿಮಾನಯಾನದ ವಿಮಾನಗಳಿಗೆ ಭಾನುವಾರ ಬಾಂಬ್ ಬೆದರಿಕೆಗಳು ಬಂದಿದ್ದು, ಆತಂಕದ ವಾತಾವರಣ ಸೃಷ್ಟಿಸಿ ಭದ್ರತಾ ಸಿಬ್ಬಂದಿಗೆ ತಲೆನೋವು ತಂದೊಡ್ಡಿತು. ಪರಿಣಾಮ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಯಾನ ಮಾರ್ಗಗಳ ಸಂಚಾರ ವ್ಯತ್ಯಯವಾಗುವಂತಾಯಿತು.
ಜೆಡ್ಡಾದಿಂದ ಮುಂಬೈ, ಕೋಝಿಕ್ಕೋಡ್‌ನಿಂದ ದಮ್ಮಾಮ್, ದೆಹಲಿಯಿಂದ ಇಸ್ತಾಂಬುಲ್, ಮುಂಬೈನಿಂದ ಇಸ್ತಾಂಬುಲ್, ಪುಣೆಯಿಂದ ಜೋಧ್‌ಪುರ ಮತ್ತು ಗೋವಾದಿಂದ ಅಹಮದಾಬಾದ್ ತೆರಳುತ್ತಿದ್ದ ಇಂಡಿಗೋ ವಿಮಾನಯಾನ ಸಂಸ್ಥೆಯ ವಿಮಾನಗಳಿಗೆ ಬೆದರಿಕೆಗಳು ಬಂದಿದ್ದವು. ಅದೇ ರೀತಿ ದೆಹಲಿಯಿಂದ ಫ್ರಾಂಕ್‌ಫರ್ಟ್, ಸಿಂಗಾಪುರದಿಂದ ಮುಂಬೈ, ಬಾಲಿಯಿಂದ ದೆಹಲಿ ಮತ್ತು ಮುಂಬೈನಿಂದ ಸಿಂಗಾಪುರ ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ವಿಸ್ತಾರಾ ವಿಮಾನಯಾನ ಸಂಸ್ಥೆಯ ವಿಮಾನಗಳು ಸಹ ಇದೇ ರೀತಿ ಬೆದರಿಕೆಗಳನ್ನು ಎದುರಿಸಿವೆ.
ಈ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ, ಇಂಡಿಗೋ ಮತ್ತು ವಿಸ್ತಾರಾ ವಿಮಾನಯಾನ ಸಂಸ್ಥೆಗಳೆರಡೂ ತಕ್ಷಣವೇ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಿ, ಅಗತ್ಯ ಭದ್ರತಾ ಕ್ರಮಗಳನ್ನು ಜಾರಿಗೊಳಿಸಿದ್ದವು. “ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಯು ನಮ್ಮ ಹೆಚ್ಚಿನ ಆದ್ಯತೆಯಾಗಿದೆ. ನಾವು ಸಂಬಂಧಿತ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದೊಂದಿಗೆ ಕೆಲಸ ಮಾಡುತ್ತಿದ್ದು, ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ” ಎಂದು ಇಂಡಿಗೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಬಾಂಬ್ ಬೆದರಿಕೆ ಬಂದ ಎಲ್ಲಾ ವಿಮಾನಗಳನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗಿದ್ದು, ಸುರಕ್ಷತೆ ಖಚಿತಗೊಂಡ ಬಳಿಕ ಕಾರ್ಯಾಚರಣೆ ಅನುವು ಮಾಡಿಕೊಡಲಾಗಿದೆ. ಈ ವಾರದಲ್ಲಿ ಒಟ್ಟೂ 90ಕ್ಕೂ ಹೆಚ್ಚು ಬಾಂಬ್ ಬೆದರಿಕೆಗಳು ವರದಿಯಾಗಿದ್ದು, ಅವುಗಳಲ್ಲಿ ಹೆಚ್ಚಿನವು ಹುಸಿ ಬಾಂಬ್ ಬೆದರಿಕೆಗಳಾಗಿವೆ. ಆದರೆ ನಾಗರಿಕ ವಿಮಾನಯಾನ ಅಧಿಕಾರಿಗಳು ಮತ್ತು ಕೇಂದ್ರವು ಬಾಂಬ್ ಬೆದರಿಕೆ ಒಡ್ಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.