ಸೈಬರ್ ಅಪರಾಧಗಳ ವಿರುದ್ಧ ಜಾಗೃತಿ ಅಗತ್ಯ: ಎಸ್‍ಪಿ ಹನುಮಂತರಾಯ

Hanumantharayappa Hanumantharayappa

ದಾವಣಗೆರೆ ಸೆ.25: ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿರುವಂತೆ, ಸೈಬರ್ ಅಪರಾಧಗಳ ಪ್ರಕರಣಗಳು ಕೂಡ ಅಧಿಕವಾಗುತ್ತಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಕಳವಳ ವ್ಯಕ್ತಪಡಿಸಿದರು.

ಮಹಾನಗರಪಾಲಿಕೆ ಮತ್ತು ಜಿಲ್ಲಾ ಪೊಲೀಸ್ ವತಿಯಿಂದ ಶುಕ್ರವಾರ ಪಾಲಿಕೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಸೈಬರ್ ಕ್ರೈಂ ಜಾಗೃತಿ ಅಭಿಯಾನ-2020’ ವೀಡಿಯೋ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬದಲಾದ ನಮ್ಮ ಜೀವನ ಶೈಲಿಯಿಂದಾಗಿ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಿವೆ. ಇದರೊಂದಿಗೆ ಹೊಸ ಹೊಸ ರೀತಿಯ ಸಂವಹನ ವ್ಯವಸ್ಥೆಗಳು ಬಳಕೆಯಾಗುತ್ತಿದ್ದು, ಹೆಚ್ಚಾಗಿ ಇದರ ಅಕ್ರಮ ಬಳಕೆ ನಡೆಯುತ್ತಿವೆ. ಇದನ್ನು ತಡೆಯುವ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕಾಗಿದ್ದು, ಸೈಬರ್ ಅಪರಾಧಗಳ ವಿರುದ್ಧ ಪ್ರತಿಯೊಬ್ಬರೂ ಜಾಗೃತರಾಗಬೇಕಾಗಿದೆ ಎಂದರು.

Advertisement

ಜಿಲ್ಲೆಯಲ್ಲಿ 105 ಸೈಬರ್ ಪ್ರಕರಣಗಳು: ರಾಜ್ಯದಲ್ಲಿ 2018 ರಿಂದ ಪ್ರತಿ ಜಿಲ್ಲೆಯಲ್ಲಿ ಸೈಬರ್ ಪೊಲೀಸ್ ಠಾಣೆ ತೆರೆಯಲಾಗಿದೆ. ಜಿಲ್ಲೆಯಲ್ಲಿ 2018 ರಲ್ಲಿ 15, 2019 ರಲ್ಲಿ 44 ಹಾಗೂ 2020 ರಲ್ಲಿ 46 ಪ್ರಕರಣಗಳು ಸೇರಿದಂತೆ ಒಟ್ಟು ಈವರೆಗೆ 105 ಸೈಬರ್ ಅಪರಾಧ ಪ್ರಕರಣಗಳು ಕಂಡು ಬಂದಿವೆ. ಪ್ರಸಕ್ತ ವರ್ಷ ಲಾಕಡೌನ್ ಹಿನ್ನೆಲೆಯಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು, ಈ ಬಗ್ಗೆ ಮಾಹಿತಿ ಇದ್ದವರು ಮಾತ್ರ ದೂರು ನೀಡುತ್ತಿರುವುದು ಬೇಸರದ ಸಂಗತಿ ಎಂದು ತಿಳಿಸಿದರು.

ಹೈಟೆಕ್ ಸೈಬರ್ ಲ್ಯಾಬ್:

ಸೈಬರ್ ಅಪರಾಧ ಎಸಗುವವರು ರೈತರು, ಅವಿದ್ಯಾವಂತರು, ಸಣ್ಣಪುಟ್ಟ ವ್ಯಾಪಾರಿಗಳು, ಮಹಿಳೆಯರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ವರ್ಗದವರು ಜಾಗೃತರಾಗಬೇಕು. ಈ ಬಗ್ಗೆ ಬಹಳಷ್ಟು ಎಚ್ಚರಿಕೆ ವಹಿಸಬೇಕು ಎಂದ ಅವರು, ಸೈಬರ್ ಪ್ರಕರಣ ನಿಯಂತ್ರಿಸುವಲ್ಲಿ ರಾಜ್ಯವು ಬಹಳಷ್ಟು ಮುಂಚೂಣಿಯಲ್ಲಿದೆ. ಇದಕ್ಕಾಗಿ ಸೈಬರ್ ಲ್ಯಾಬ್‍ನ್ನು ಬೆಂಗಳೂರಿನಲ್ಲಿ ತೆರೆಯಲಾಗಿದ್ದು, ದೇಶದಲ್ಲಿನ ಮೊದಲ ಹೈಟೆಕ್ ಸೈಬರ್ ಲ್ಯಾಬ್ ಇದಾಗಿದೆ ಎಂದರು.

ಅಪರಾಧ ತಡೆಗೆ ಪ್ರತಿಯೊಬ್ಬರು ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕಿದೆ. ಪಾಲಿಕೆ ವತಿಯಿಂದ ವಾಣಿಜ್ಯ ಮಳಿಗೆದಾರರಿಗೆ ಲೈಸೆನ್ಸ್ ನೀಡುವಾಗ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳುವ ಕುರಿತು ಸೂಚನೆ ನೀಡುವ ಮೂಲಕ ಸಿಸಿ ಕ್ಯಾಮೆರಾ ಅಳಡಿಕೆಯನ್ನು ಕಡ್ಡಾಯಗೊಳಿಸಲು ಕ್ರಮ ವಹಿಸಬೇಕು. 100 ಜನ ಇರುವಂತಹ ಪ್ರದೇಶಗಳಲ್ಲಿ ಹಾಗೂ 500 ಜನ ಬಂದು ಹೋಗುವಂತಹ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಸಿಸಿ ಕ್ಯಾಮೆರಾಗಳು ನಗರಗಳಲ್ಲಿ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಸಹಕಾರಿಯಾಗಲಿವೆ. ಅಪರಾಧಿಗಳು ಮನುಷ್ಯನ ಹಾಗೂ ಪೊಲೀಸ್‍ನವರ ಕಣ್ಣು ತಪ್ಪಿಸಬಹುದು. ಆದರೆ ಕ್ಯಾಮೆರಾಗಳ ಕಣ್ಣು ತಪ್ಪಿಸಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾನಗರಪಾಲಿಕೆ ಮೇಯರ್ ಬಿ.ಜಿ.ಅಜಯ ಕುಮಾರ್ ಮಾತನಾಡಿ, ಸೈಬರ್ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಒಂದು ಹೊಸ ಬದಲಾವಣೆ ತರಲು ಅವಕಾಶ ಒದಗಿಸಲಿದೆ. ಜೊತೆಗೆ ಮೋಸ ಹೋಗುವವರನ್ನು ತಡೆಯಲು ಇದು ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಂತ್ರಜ್ಞಾನ ಮುಂದುವರೆದಿದ್ದು, ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಸೈಬರ್ ಪ್ರಕರಣದ ಘಟನೆಗಳು ನಡೆಯುತ್ತಿವೆ. ಎಟಿಎಂ, ಬ್ಯಾಂಕ್ ಅಕೌಂಟ್ ಕುರಿತು, ಲಾಟರಿ, ಗಿಫ್ಟ್ ಬಂದಿರುವ ಬಗ್ಗೆ, ಉದ್ಯೋಗ ಕೊಡಿಸುವುದಾಗಿ ಹಾಗೂ ಓಎಲ್‍ಎಕ್ಸ್ ಹೆಸರಿನಲ್ಲಿ, ಸಾಲ ಕೊಡಿಸುವ ಹೆಸರಿನಲ್ಲಿ ಹೀಗೆ ದಿನನಿತ್ಯ ಒಂದಲ್ಲ ಒಂದು ವಿಷಯಗಳಲ್ಲಿ ಸೈಬರ್ ಅಪರಾಧ ಎಸಗಲಾಗುತ್ತಿದೆ. ಈ ಕುರಿತು ಜನರಲ್ಲಿ ಅರಿವು ಬಹಳ ಮುಖ್ಯವಾಗಿದ್ದು, ಪ್ರತಿಯೊಬ್ಬರು ಜಾಗೃತರಾಗಬೇಕಿದೆ ಎಂದು ಸಲಹೆ ನೀಡಿದರು.

ಎಸ್‍ಪಿ ಅವರ ಸಲಹೆ ಮೇರೆಗೆ ಅಪರಾಧ ಪ್ರಕರಣ ತಡೆಗೆ ಸಹಕಾರಿಯಾಗಿ ಮುಂದಿನ ದಿನಗಳಲ್ಲಿ ನಗರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಕುರಿತು ಹಾಗೂ ವಾಣಿಜ್ಯ ಮಳಿಗೆ ಕಟ್ಟಿಕೊಳ್ಳುವವರಿಗೆ ಲೈಸೆನ್ಸ್ ನೀಡುವ ವೇಳೆ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಲು ತಿಳಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಮಹಾನಗರಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಮಾತನಾಡಿ, ಕಾರ್ಪೋರೇಶನ್ ಅಂದರೆ ಬರೀ ಕಸ ಗುಡಿಸುವುದು, ಚರಂಡಿ ಸ್ವಚ್ಛಗೊಳಿಸುವುದು ಹಾಗೂ ಬೀದಿ ದೀಪ ಅಳವಡಿಸುವುದು ಮಾತ್ರವಲ್ಲ. ಅದರಿಂದಾಚೆಗೆ ಜನರಲ್ಲಿ ಸೈಬರ್ ಅಪರಾಧದ ಕುರಿತು ಜಾಗೃತಿ ಮೂಡಿಸುವಲ್ಲಿಯೂ ತನ್ನ ಪಾತ್ರವಿದೆ ಎಂದು ಈ ಕಾರ್ಯಕ್ರಮ ತೋರಿಸಿಕೊಟ್ಟಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಾರ್ಡ್ ಮಟ್ಟದಲ್ಲಿ ಜಾಗೃತಿ ಅಭಿಯಾನ ನಡೆಸಬೇಕಿದೆ ಎಂದರು.

ಜಿಲ್ಲಾ ಸೈಬರ್ ಪೊಲೀಸ್ ಇನ್‍ಸ್ಪೆಕ್ಟರ್ ಮುಸ್ತಾಕ್ ಅಹಮದ್ ಮಾತನಾಡಿ, ಸೈಬರ್ ಅಪರಾಧ ತಡೆಗೆ ಸಾರ್ವಜನಿಕರಲ್ಲಿ ಜಾಗೃತಿ ಅವಶ್ಯಕವಾಗಿದ್ದು, ಅಭಿಯಾನ ಕಾರ್ಯಕ್ರಮದ ಮೂಲಕ ಕೈ ಜೋಡಿಸಲಾಗಿರುವುದು ಒಳ್ಳೆಯ ಬೆಳವಣಿಗೆ. ಯಾವುದೇ ಬ್ಯಾಂಕ್ ಅಧಿಕಾರಿಗಳು ಫೋನ್ ಮಾಡಿ ಮಾಹಿತಿ ಕೇಳುವುದಿಲ್ಲ. ಜೊತೆಗೆ ಮೊಬೈಲ್ ಸಂದೇಶದೊಂದಿಗೆ ಲಾಟರಿ ಬಹುಮಾನ ಬಂದಿದೆ ಎಂದು ಯಾರೂ ಫೋನ್ ಮೂಲಕ ಕೇಳುವುದಿಲ್ಲ. ದಯಮಾಡಿ ಈ ಎರಡು ವಿಷಯಗಳನ್ನು ಜನರು ಗಂಭೀರವಾಗಿ ಪರಿಗಣಿಸಿದರೆ, ಯಾರೊಬ್ಬರು ಮೋಸಕ್ಕೆ ಬಲಿಯಾಗುವ ಪ್ರಮೇಯ ಉದ್ಘವಾಗುವುದಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪ ಮೇಯರ್ ಸೌಮ್ಯ ನರೇಂದ್ರಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಸ್.ಟಿ.ವಿರೇಶ್, ಪ್ರಸನ್ನ ಕುಮಾರ್, ಗೌರಮ್ಮ ಗಿರಿರಾಜ್, ಜಯಮ್ಮ ಗೋಪಿನಾಥ್, ಮಹಾನಗರಪಾಲಿಕೆಯ ಆಯುಕ್ತ ವಿಶ್ವನಾಥ್ ಮುದಜ್ಜಿ, ಡಿವೈಎಸ್‍ಪಿ ಬಸವರಾಜ್ ಸೇರಿದಂತೆ ಮಹಾನಗರಪಾಲಿಕೆಯ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಮತ್ತು ಪೊಲೀಸ್ ಇಲಾಖೆಯೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement