ಬೆಂಗಳೂರು: ಈಶಾನ್ಯ ಬೆಂಗಳೂರಿನ ಹೆಣ್ಣೂರು-ಬಾಗಲೂರು ಮುಖ್ಯ ರಸ್ತೆಯಲ್ಲಿ ತಡರಾತ್ರಿ ಕ್ಯಾಂಟರ್ ಟ್ರಕ್ ಹರಿದ ಪರಿಣಾಮ ಚಿತ್ತೂರಿನ 12 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ ಸುಮಾರು 11:20ರ ವೇಳೆಗೆ ಮೃತ ಭಾನು ತೇಜಾ ಎಂಬಾತ ತನ್ನ ಹಿರಿಯ ಸೋದರ ಸಂಬಂಧಿ ಚಕ್ರಧರನ್ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರಿ ಮಾಡುತ್ತಿದ್ದ. ಈ ವೇಳೆ ಟ್ರಕ್ ಇದ್ದಕ್ಕಿದ್ದಂತೆ ಬಲಕ್ಕೆ ತಿರುಗಿದ ಪರಿಣಾಮ ಬೈಕ್ ಪಲ್ಚಿಯಾಗಿದ್ದು ಬಾಲಕ ಲಾರಿಗೆ ಕೆಳಗೆ ಬಿದ್ದಿದ್ದಾನೆ.
ಬಾಲಕ ಸೈಕಲ್ ಹೆಲ್ಮೆಟ್ ಧರಿಸಿದ್ದ. ಪರಿಣಾಮ ಲಾರಿಯ ಚಕ್ರ ಬಾಲಕನ ತಲೆಯ ಮೇಲೆ ಹರಿದಿದ್ದು ತಲೆ ಅಪ್ಪಚ್ಚಿಯಾಗಿದೆ.
ಮೃತ ತೇಜಾ ವೇದಗಳನ್ನು (ವೇದಾಭ್ಯಾಸ) ಅಧ್ಯಯನ ಮಾಡಲು ಬೆಂಗಳೂರಿಗೆ ಬಂದಿದ್ದ. ಆರ್.ಟಿ. ನಗರದಲ್ಲಿ ವೇದ ತರಗತಿಗಳನ್ನು ನಡೆಸಲಾಗುತ್ತಿತ್ತು. ಹೀಗಾಗಿ ಪಂಡಿತರು ವಾಸವಾಗಿದ್ದ ಅದೇ ಆವರಣದಲ್ಲಿ ಆತ ವಾಸಿಸುತ್ತಿದ್ದ.
ವಾಹನದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಹೆಣ್ಣೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.