kalratri devi : ನವರಾತ್ರಿಯ ಏಳನೇ ದಿನವನ್ನು ಕಾಳರಾತ್ರಿ ದೇವಿಗೆ ಸಮರ್ಪಿಸಲಾಗಿದೆ. ಕಾಳರಾತ್ರಿ ದೇವಿಯು ದುರ್ಗೆಯ ಭಯಾನಕ ರೂಪಗಳಲ್ಲಿ ಒಂದಾಗಿದ್ದು, ಆಕೆಯ ಶರೀರದ ಬಣ್ಣವು ಗಾಢಾಂಧಕಾರದಂತೆ ಇರುತ್ತದೆ. ಜಡೆಯನ್ನು ಹರಡಿಕೊಂಡಿರುವ ಈಕೆ ಮೂರು ಕಣ್ಣುಗಳನ್ನು ಹೊಂದಿದ್ದು, ಅವು ಬ್ರಹ್ಮಾಂಡದ ರೀತಿಯಲ್ಲಿ ಗೋಲಾಕಾರವಾಗಿವೆ. ತಾಯಿಯ ವಾಹನವು ಕತ್ತೆ ಆಗಿದೆ. ಎಡ ಬದಿಯ ಎರಡು ಕೈಗಳ ಪೈಕಿ ಒಂದರಲ್ಲಿ ಕುಡುಗೋಲು ಹಾಗೂ ಕಬ್ಬಿಣದ ಮುಳ್ಳಿನ ಖಡ್ಗ ಹಿಡಿದಿದ್ದಾಳೆ. ಬಲಗಡೆಯ ಎರಡು ಕೈಗಳಲ್ಲಿ ವರ ಮುದ್ರೆ ಹಾಗೂ ಅಭಯ ಮುದ್ರೆ ಹೊಂದಿದ್ದಾಳೆ.
ಕಾಳರಾತ್ರಿ ದೇವಿಯು ದುರ್ಗೆಯ ಅತ್ಯಂತ ಆಕ್ರಮಣಕಾರಿ ರೂಪ. ಈ ದೇವಿಯೂ ಚತುರ್ಭುಜದವಳು. ಬಲಗೈಯಿಂದ ಭಕ್ತರಿಗೆ ವರವನ್ನು ನೀಡುತ್ತಾಳೆ. ಎಡಗೈಯಲ್ಲಿ ಖಡ್ಗ, ಕಬ್ಬಿಣದ ಸಲಾಕೆಯನ್ನು ಹಿಡಿದಿದ್ದಾಳೆ. ಎಲ್ಲರಿಂದಲೂ ತಿರಸ್ಕರಿಸಲ್ಪಟ್ಟ ಕತ್ತೆಯನ್ನು ವಾಹನವನ್ನಾಗಿ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ : ಇಂದು ನವರಾತ್ರಿಯ 6ನೇ ದಿನ ಕಾತ್ಯಾಯಿನಿ ದೇವಿಯ ಪೂಜೆ; ಕಾತ್ಯಾಯಿನಿ ದೇವಿಯ ಆರಾಧಕರಾಗಿದ್ದ ಶ್ರೀ ರಾಮ, ಶ್ರೀ ಕೃಷ್ಣ
ಕಾಳರಾತ್ರಿ ಹೆಸರು ಹೇಗೆ ಬಂತು

ದೇವಿ ಭಾಗವತ ಪುರಾಣದ ಪ್ರಕಾರ, ಅಂಬಿಕಾ ದೇವಿಯು (ಚಂಡಿಕಾ) ಪಾರ್ವತಿ ದೇವಿಯ ಶರೀರದಿಂದ ಹೊರಬಂದ ನಂತರ, ಚರ್ಮವು ಕಡು ಕಪ್ಪು ವರ್ಣಕ್ಕೆ ತಿರುಗುತ್ತದೆ. ಹೀಗಾಗಿ ಈ ರೂಪಕ್ಕೆ ಕಾಳರಾತ್ರಿ ಎಂಬ ಹೆಸರು ಬಂತು. ದೇವಿಯು ಶಿವನ ಸಲಹೆಯಂತೆ ಶು೦ಭ-ನಿಶುಂಭ, ರಕ್ತಬೀಜಾಸುರರನ್ನು ಸಂಹಾರ ಮಾಡಲು ಈ ರೂಪವನ್ನು ತಾಳಿದಳು.
ಕಾಳರಾತ್ರಿ ದೇವಿಯನ್ನು ಶುಭಂಕರಿ ದೇವತೆ ಎಂದೂ ಕರೆಯುತ್ತಾರೆ
ಕಾಳರಾತ್ರಿ ದೇವಿಯನ್ನು ಶುಭಂಕರಿ ಎಂದು ಕರೆಯುವುದಕ್ಕೆ ಕಾರಣ, ಆಕೆ ತನ್ನ ಭಕ್ತರಿಗೆ ಸದಾ ಶುಭಕರ ಫಲಿತಾಂಶಗಳನ್ನು ನೀಡುತ್ತಾಳೆ ಎಂಬ ನಂಬಿಕೆ. ಶುಭಂಕರಿ ಎಂಬುದು ಸಂಸ್ಕೃತದಲ್ಲಿ ಶುಭ ಅಥವಾ ಒಳ್ಳೆಯದನ್ನು ಮಾಡುವುದು ಎಂದರ್ಥ. ಕಾಳರಾತ್ರಿ ದೇವಿಯು ದುರ್ಗಾ ದೇವಿಯ ಏಳನೇ ರೂಪವಾಗಿದ್ದು ಆಕೆಯು ಶತ್ರುಗಳ ವಿರುದ್ಧ, ನಕಾರಾತ್ಮಕ ಶಕ್ತಿಗಳ ವಿರುದ್ಧ ಜಯವನ್ನು ಸಾಧಿಸಲು ಸಹಾಯ ಮಾಡುತ್ತಾಳೆ. ಆಕೆಯು ತನ್ನ ಭಕ್ತರನ್ನು ನಿರ್ಭೀತರನ್ನಾಗಿ ಮಾಡುತ್ತಾಳೆ ಮತ್ತು ಅವರ ಜೀವನದಲ್ಲಿ ಶುಭವನ್ನು ತರಲು ಸಹಾಯ ಮಾಡುತ್ತಾಳೆ.
ಇದನ್ನೂ ಓದಿ: ಇಂದು ನವರಾತ್ರಿಯ ಐದನೇ ದಿನ ಸ್ಕಂದ ಮಾತೆಯ ಆರಾಧನೆ; ಈ ತಪ್ಪುಗಳನ್ನು ಮಾಡಲೇಬಾರದು
ಫಲಾಫಲಗಳು
ಕಾಳರಾತ್ರಿ ದೇವಿಯನ್ನು ಪೂಜಿಸುವುದರಿಂದ ವ್ಯಕ್ತಿಯು ಸಕಲ ಸಿದ್ಧಿಗಳನ್ನು ಪಡೆಯುತ್ತಾನೆ. ಇನ್ನು, ಮಹಾಶಕ್ತಿಗಳನ್ನು ತಂತ್ರ – ಮಂತ್ರಗಳನ್ನು ಅಭ್ಯಾಸ ಮಾಡುವ ಜನರಲ್ಲಿ ಕಾಳರಾತ್ರಿ ದೇವಿಯು ಹೆಚ್ಚು ಪ್ರಚಲಿತದಲ್ಲಿದ್ದಾಳೆ. ತಾಯಿಯ ಮೇಲಿನ ಭಕ್ತಿಯು ದುಷ್ಟರನ್ನು ನಾಶಪಡಿಸಿ, ಎಲ್ಲಾ ರೀತಿಯ ಗ್ರಹಗಳ ಅಡೆತಡೆಗಳನ್ನು ನಿವಾರಿಸುತ್ತದೆ.
ಕಾಳರಾತ್ರಿ ದೇವಿ ಪೂಜೆಯನ್ನು ಈ ಶುಭ ಮುಹೂರ್ತದಲ್ಲಿ ಮಾಡಿ
ನವರಾತ್ರಿಯ 7ನೇ ದಿನ ಕಾಳರಾತ್ರಿ ದೇವಿಯ ಪೂಜೆಗೆ ಶುಭ ಮುಹೂರ್ತ ಹೀಗಿದೆ. ಅಕ್ಟೋಬರ್ 9 ರಂದು ಬುಧವಾರ ಸಪ್ತಮಿ ತಿಥಿ ಬೆಳಗ್ಗೆ 06:25 ಕ್ಕೆ ಆರಂಭವಾಗಿ 07:52 ರವರೆಗೆ ಮುಗಿಯುತ್ತದೆ. ಮಧ್ಯಾಹ್ನ 11:45 ರಿಂದ 12:35 ರವರೆಗೆ ಅಭಿಜಿತ್ ಮುಹೂರ್ತ, ಮಧ್ಯಾಹ್ನ 2:10 ರಿಂದ 2:55 ರವರಗೆ ವಿಜಯ ಮುಹೂರ್ತ, ಸಂಜೆ 5:45 ರಿಂದ 6:10 ರವರೆಗೆ ಗೋಧೂಳಿ ಮುಹೂರ್ತ, ರಾತ್ರಿ 8:30 ರಿಂದ 10:00 ರವರೆಗೆ ಅಮೃತ ಕಾಲ. ಈ ಸಮಯಗಳಲ್ಲಿ ಪೂಜೆ ಮಾಡಿದರೆ ದೇವಿಯ ಕೃಪೆ ದೊರೆಯುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ: kushmanda devi : ಇಂದು ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡಾ ದೇವಿಯ ಆರಾಧನೆ
ಕಾಳರಾತ್ರಿ ದೇವಿ ಪೂಜಾ ವಿಧಾನ
- ಈ ದಿನ ಸ್ನಾನದ ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿ.
- ಕಲಶವನ್ನು ಪೂಜಿಸುವ ಮೂಲಕ ಕಾಳರಾತ್ರಿ ಪೂಜೆಯನ್ನು ಪ್ರಾರಂಭಿಸಿ.
- ಅಮ್ಮನಿಗೆ ಪಂಚಾಮೃತ ಸ್ನಾನ ಮಾಡಿಸಿ ಅಮ್ಮನ ಅಲಂಕಾರ ಮಾಡಿ.
- ಕೆಂಪು ಹೂವು, ಬಳೆ, ಲವಂಗ, ಏಲಕ್ಕಿ, ಕುಂಕುಮ, ವೀಳ್ಯದೆಲೆ, ಅಡಿಕೆ ಅರ್ಪಿಸಿ.
- ದೇವಿ ಮಂತ್ರ ಪಠಿಸುತ್ತಾ ಗೋಡಂಬಿ, ಬಾದಾಮಿ, ಹಣ್ಣು-ಸಿಹಿತಿಂಡಿಗಳನ್ನು ಅರ್ಪಿಸಿ.
- ನಂತರ ತಾಯಿಗೆ ಆರತಿ ಮಾಡಿ, ದಾನ ಮಾಡಿ.
ದೇವಿಗೆ ಈ ನೈವೇದ್ಯ ಮಾಡಿ
ನವರಾತ್ರಿಯ ಏಳನೇ ದಿನದಂದು ದೇವಿಗೆ ಖೀರ್‌ನ್ನು ನೈವೇದ್ಯ ಮಾಡಬೇಕು. ಋತುಮಾನಕ್ಕೆ ದೊರೆಯುವ ಹಣ್ಣುಗಳನ್ನು ಸಹ ಅರ್ಪಿಸಬಹುದು. ಸಂಜೆ ಅಮ್ಮನಿಗೆ ಖಿಚಡಿ ನೈವೇದ್ಯ ಮಾಡಬೇಕು. ದೇವಿಯನ್ನು ಪೂಜಿಸುವ ಮೊದಲು, ಅವಳನ್ನು ಧ್ಯಾನಿಸುತ್ತಾ ಮಂತ್ರವನ್ನು ಪಠಿಸಬೇಕು