ವಿಜಯನಗರ: ಸಿಎನ್‌ಜಿ ಗ್ಯಾಸ್ ಸಾಗಿಸುತ್ತಿದ್ದ ಲಾರಿಯಿಂದ ಗ್ಯಾಸ್ ಲೀಕೇಜ್ ಆಗಿ ಆತಂಕ ಸೃಷ್ಟಿಸಿದ ಘಟನೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ತಿಪ್ಪಾಪುರ ಗ್ರಾಮದ ಬಳಿ ನಡೆದಿದೆ. ಲಾರಿಯಲ್ಲಿನ ಗ್ಯಾಸ್ ಟ್ಯಾಂಕ್ ಪೈಪ್ ಕಟ್ ಆಗಿ ಅನಿಲ ಸೋರಿಕೆಯಾಗಿದ್ದು, ಲಾರಿ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
ತಿಪ್ಪಾಪುರ ಗ್ರಾಮದ ಖಾಸಗಿ ಕಂಪನಿಯಿಂದ ಸಿಎನ್ ಜಿ ಗ್ಯಾಸ್ ತುಂಬಿಕೊಂಡು ಗದಗ ಜಿಲ್ಲೆಯ ನರಗುಂದ ಪೆಟ್ರೋಲ್ ಬಂಕ್ ಗೆ ಲಾರಿ ತೆರಳುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ಲಾರಿಯಲ್ಲಿ ಗ್ಯಾಸ್ ಲೀಕ್ ಆಗಿ ಸೋರಿಕೆಯಾಗುತ್ತಿದ್ದ ಶಬ್ದದಿಂದ ಎಚ್ಚೆತ್ತು ರಸ್ತೆ ಪಕ್ಕ ಲಾರಿ ನಿಲ್ಲಿಸಿ ಚಾಲಕ ದೂರ ಹೋಗಿದ್ದಾನೆ. ಇದೇ ರಸ್ತೆ ಮೂಲಕ ತೆರಳುತ್ತಿದ್ದ ವಾಹನ ಸವಾರರಿಗೆ ಬೇರೆ ಮಾರ್ಗವಾಗಿ ಹೋಗುವಂತೆ ತಿಳಿಸಿದ್ದಾನೆ.
ಚಾಲಕನ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ 60 ಟ್ಯಾಂಕ್ ಗಳಲ್ಲಿನ ಸಂಪೂರ್ಣ ಗ್ಯಾಸ್ ಖಾಲಿಯಾಗುವವರೆಗೂ ಸ್ಥಳದಲ್ಲಿದ್ದು ಮುನ್ನೆಚ್ಚರಿಕೆ ವಹಿಸಿದ್ದಾರೆ. ಸಿಎನ್‌ಜಿ ಸಂಪೂರ್ಣ ಖಾಲಿಯಾಗುವವರೆಗೂ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ವಲ್ಪ ಹೆಚ್ಚು ಕಡಿಮೆಯಾಗಿದ್ರೂ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು.
ದೊಡ್ಡದೊಂದು ದುರಂತ ಮುನ್ನೆಚ್ಚರಿಕಾ ಕ್ರಮಗಳಿಂದ ತಪ್ಪಿದಂತಾಗಿದ್ದು, ಗ್ಯಾಸ್ ಸರಬರಾಜು ವಾಹನಗಳ ಮೇಲೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.