ಬೆಂಗಳೂರು: ಪತಿ ಮತ್ತು ಆತನ ತಂದೆ ಸೇರಿ ಮಹಿಳೆಯೊಬ್ಬಳನ್ನು ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ದಾಬಸ್ ಪೇಟೆಯಲ್ಲಿ ಈ ಘಟನೆ ನಡೆದಿದೆ.
ಹೌದು, ರೇಖಾ (30) ಮೃತ ಮಹಿಳೆಯಾಗಿದ್ದು, ಈಕೆಯ ಮಾವ ನಾರಯಣಪ್ಪ ಮತ್ತು ಪತಿ ಗಿರೀಶ್ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದ್ದು, ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತುಮಕೂರಿನ ದಿಬ್ಬೂರು ಮೂಲದ ರೇಖಾಗೆ 12 ವರ್ಷದ ಹಿಂದೆ ಗಿರೀಶ್ ಜೊತೆ ಮದುವೆ ಮಾಡಿಕೊಡಲಾಗಿತ್ತು. ಕಳೆದ ಎರಡು ವರ್ಷಗಳಿಂದ ಹಣಕ್ಕಾಗಿ ಪತಿ ಮನೆಯವರು ರೇಖಾಳಿಗೆ ದಿನನಿತ್ಯ ಕಿರುಕುಳ ನೀಡುತಿದ್ದರು. ನಿನ್ನೆಯೂ ಅದೇ ರೀತಿ ಜಗಳ ಶುರು ಮಾಡಿ ಹಲ್ಲೆ ಮಾಡಲು ಮುಂದಾಗಿದ್ದು, ಈ ವೇಳೆ ರೇಖಾ ತವರು ಮನೆಯವರಿಗೆ ಕರೆ ಮಾಡಿ ಬೇಗ ಬರುವಂತೆ ಹೇಳಿದ್ದಾಳೆ.
ಇನ್ನು, ಪೋಷಕರು ಮನೆ ಬಳಿ ಬರುವಷ್ಟರಲ್ಲಿ ಕೊಲೆ ನಡೆದುಹೋಗಿದ್ದು, ಈ ಸಂಬಂಧ ಬೆಂಗಳೂರಿನ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.