ರಾಜಸ್ಥಾನ: ನಕಲಿ ಬಂಡವಾಳ ಹೂಡಿಕೆ ಯೋಜನೆ ಮೂಲಕ ರಾಜಸ್ಥಾನದ ಅಜಮೀರ್ ಮೂಲದ 11ನೇ ತರಗತಿ ವಿದ್ಯಾರ್ಥಿ 200 ಮಂದಿಗೆ ವಂಚಿಸಿ ಸಿಕ್ಕಿಬಿದ್ದಿದ್ದಾನೆ. ಯೂಟ್ಯೂಬ್ ಇನ್ಫೂಯೆನ್ಸರ್ ಆಗಿರುವ 19 ವರ್ಷದ ಬಾಲಕ ಕಾಸಿಫ್ ಮಿಶ್ರಾ ಆನ್ ಲೈನ್ ಮೂಲಕ ಬಂಡವಾಳ ಹೂಡಿಕೆ ಮೂಲಕ 200 ಮಂದಿಗೆ ವಂಚಿಸಿ ಸುಮಾರು 42 ಲಕ್ಷ ರೂ. ವಸೂಲಿ ಮಾಡಿದ್ದಾನೆ.
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ಸಂಖ್ಯೆಯ ಫಾಲೋವರ್ಸ್‌ಗಳನ್ನು ಹೊಂದಿರುವ ಕಾಸಿಫ್ ಮಿಶ್ರಾ ತನ್ನ ಚಾನೆಲ್ ಮೂಲಕ ಬಂಡವಾಳ ಹೂಡಿಕೆಯ ಆಮಿಷ ಒಡ್ಡಿದ್ದಾನೆ. ಆರಂಭದಲ್ಲಿ ಕಡಿಮೆ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದರವರಿಗೆ ಹೆಚ್ಚು ಹಣವನ್ನು ವಾಪಾಸ್ ನೀಡಿ ನಂಬಿಕೆ ಗಳಿಸಿದ್ದು, ನಿಮ್ಮ ಪರಿಚಯಸ್ಥರಿಗೂ ಲಾಭ ಗಳಿಸಲು ಹಣ ಹೂಡಿಕೆ ಮಾಡಲು ಹೇಳುವಂತೆ ಕಾಸಿಫ್ ಲಾಭದ ಆಸೆ ತೋರಿಸಿ ಪುಸಲಾಯಿಸಿದ್ದ.
ನಂತರ 99,999 ರೂ. ಬಂಡವಾಳ ಹೂಡಿದರೆ 13 ತಿಂಗಳಲ್ಲಿ 13,99,999 ರೂ. ಗಳಿಸಬಹುದು ಎನ್ನುವ ಬಾಲಕನ ಆಮಿಷದ ಮಾತಿಗೆ ಮರುಳಾಗಿ ಸುಮಾರು 200 ಮಂದಿ ಹಣ ಹೂಡಿಕೆ ಮಾಡಿದ್ದರು. ದಾಳಿ ಮಾಡಿದ ಪೊಲೀಸರು ಬಾಲಕನ ಮನೆಯಲ್ಲಿ ಹಣ ಎಣಿಸುವ ಯಂತ್ರ, ಕಾರು, ಲ್ಯಾಪ್ ಟಾಪ್, ಮೊಬೈಲ್ ಮುಂತಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಬಾಲಕನನ್ನು ಎರಡು ದಿನಗಳ ಕಾಲ ರಿಮ್ಯಾಂಡ್ ಹೋಂಗೆ ಕಳುಹಿಸಲಾಗಿದೆ.