ದಾವಣಗೆರೆ ಮಾ.30: ಸಾರ್ವಜನಿಕರು ಪರಿಣಿತ ಪ್ರಾಪರ್ಟೀಸ್ & ಇನ್ಫ್ರಾಸ್ಟ್ರಕ್ಚರ್.ಲಿ. ಕಂಪನಿಯಲ್ಲಿ ನಿವೇಶನ ಅಥವಾ ಹೆಚ್ಚಿನ ಬಡ್ಡಿ ಹಣ ಕೊಡುತ್ತೇವೆಂದು ಹೇಳಿ ಹಣ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಿರುತ್ತಾರೆಂದು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸ್ ನಿರೀಕ್ಷಕ ಬಿ.ವಿ.ಗಿರೀಶ್ ತಿಳಿಸಿದ್ದಾರೆ.
ಪರಿಣಿತ ಪ್ರಾಪರ್ಟೀಸ್ & ಇನ್ಫ್ರಾಸ್ಟ್ರಕ್ಚರ್.ಲಿ. ಕಂಪನಿಯವರು ನಿವೇಶನ ಅಥವಾ ಹೆಚ್ಚಿನ ಬಡ್ಡಿ ಹಣ ಕೊಡುತ್ತೇವೆಂದು ಹೇಳಿ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡು ವಾಪಾಸ್ ನೀಡದೇ ಮೋಸ ಮಾಡಿರುತ್ತಾರೆಂದು 2020 ರ ಜೂನ್ 06 ರಂದು ಕೆ.ಎಂ ಮುರುಗೇಂದ್ರಯ್ಯ ಠಾಣೆಗೆ ದೂರು ಕೊಟ್ಟಿರುತ್ತಾರೆ. ಈ ಕಂಪನಿಯ ಮಾಲೀಕರ ವಿರುದ್ದ ದಾವಣಗೆರೆ ಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ನಂತರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಆದೇಶದನ್ವಯ ಈ ಪ್ರಕರಣವು ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ತನಿಖೆಯಲ್ಲಿರುತ್ತದೆ.
ಈ ಪ್ರಕರಣದಲ್ಲಿ ಆರೋಪಿಯು ಸಾರ್ವಜನಿಕರಿಂದ ಹಣವನ್ನು ಪಡೆದು ಪರಿಣಿತ ಪ್ರಾಪರ್ಟೀಸ್ & ಇನ್ಫ್ರಾಸ್ಟ್ರಕ್ಚರ್.ಲಿ. ಕಂಪನಿಯಲ್ಲಿ ಹೂಡಿಕೆ ಮಾಡಿ, ನಂತರ ನಿವೇಶನವಾಗಲೀ ಅಥವಾ ಹಣವಾಗಲೀ ವಾಪಾಸ್ ನೀಡದೇ ಮೋಸ ಮಾಡಿರುತ್ತಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಕಂಪನಿಯಲ್ಲಿ ಹೂಡಿಕೆ ಮಾಡಿ ಮೋಸ ಹೋಗಿರುವವರು ಯಾರಾದರೂ ಇದ್ದರೆ ಅಂತಹ ಹೂಡಿಕೆದಾರರು ಕೂಡಲೇ ಸೂಕ್ತ ದಾಖಲೆಗಳೊಂದಿಗೆ ದಾವಣಗೆರೆ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ತನಿಖಾಧಿಕಾರಿಯವರನ್ನು ಸಂಪರ್ಕಿಸಿ ದೂರು ಸಲ್ಲಿಸುವಂತೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಬಿ.ವಿ.ಗಿರೀಶ್ ತಿಳಿಸಿದ್ದಾರೆ.




