ಮುಂಬೈ: ಮುಂಬೈ ಬಳಿ ನೌಕಾಪಡೆಯ ಹಡಗು ನಿಯಂತ್ರಣ ಕಳೆದುಕೊಂಡು ಪ್ರಯಾಣಿಕರ ದೋಣಿಗೆ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ದುರಂತ ದೋಣಿ ಅಪಘಾತದಲ್ಲಿ 13 ಜನರು ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ಈ ದೋಣಿಯು ಗೇಟ್ವೇ ಆಫ್ ಇಂಡಿಯಾದಿಂದ ಎಲಿಫೆಂಟಾ ದ್ವೀಪಕ್ಕೆ ಜನರನ್ನು ಕರೆದೊಯ್ಯುತ್ತಿದ್ದಾಗ ಸಂಜೆ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.
ದುರಂತ ಸಂಭವಿಸಿದ ವೇಳೆ ಮೊದಲು ರಕ್ಷಣೆಗೆ ಧಾವಿಸಿದ ದೋಣಿ ಚಾಲಕನಾದ ಆರಿಫ್ ಬಮಾನೆ, ಮುಳುಗಿಹೋದ ಚಿಕ್ಕ ಹುಡುಗಿಯನ್ನು ರಕ್ಷಣೆ ಮಾಡಿದ ಹೃದಯ ವಿದ್ರಾವಕ ಕ್ಷಣವನ್ನು ಹಂಚಿಕೊಂಡರು. ಅವರು ಮೊದಲು ಮಹಿಳೆಯರು ಮತ್ತು ಮಕ್ಕಳಿಗೆ ಸಹಾಯ ಮಾಡುವತ್ತ ಗಮನ ಹರಿಸಿದರು. ನೌಕಾ ದೋಣಿಗಳು ಆಗಮಿಸುವ ಮೊದಲೇ ಬಮಾನೆ ಅವರ ತಂಡವು ಸುಮಾರು 20-25 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಯಿತು.
ಮತ್ತೊಬ್ಬ ದೋಣಿ ಚಾಲಕ ಇಕ್ಬಾಲ್ ಗೋಥೇಕರ್ ಕೂಡ ಈ ದುರಂತದ ದೃಶ್ಯಕ್ಕೆ ಸಾಕ್ಷಿಯಾಗಿದ್ದು, ಮುಳುಗಿದ ದೋಣಿಯಲ್ಲಿದ್ದ ಜನರು ಸಹಾಯಕ್ಕಾಗಿ ತೀವ್ರವಾಗಿ ಕೈ ಬೀಸುತ್ತಿದ್ದರು ಎಂದು ಹೇಳಿದ್ದಾರೆ. ಅವರು 16 ಜನರನ್ನು ರಕ್ಷಿಸಿ ಸುರಕ್ಷಿತವಾಗಿ ದಡಕ್ಕೆ ಮರಳಿಸಿದರು.
ಡಿಕ್ಕಿ ಹೊಡೆಯುವ ಸ್ವಲ್ಪ ಮೊದಲು 80 ಪ್ರಯಾಣಿಕರೊಂದಿಗೆ ನೀಲ್ ಕಮಲ್ ಎಂಬ ದೋಣಿ ಗೇಟ್ ವೇ ಆಫ್ ಇಂಡಿಯಾದಿಂದ ಹೊರಟಿತ್ತು. ಈ ಘಟನೆಯು ಅನೇಕರ ನೆರವಿನಲ್ಲಿ ನಡೆದ ಅತಿದೊಡ್ಡ ರಕ್ಷಣಾ ಕಾರ್ಯಾಚರಣೆಗಳಲ್ಲಿ ಒಂದಾಗಿದೆ.