ಬೆಂಗಳೂರು: ಪ್ರಕೃತಿ ಪ್ರಿಯರ ಹಾಗೂ ಪ್ರವಾಸಿಗರ ನೆಚ್ಚಿನ ತಾಣ ಗೋವಾ-ಕರ್ನಾಟಕ ಗಡಿಯ ದೂಧಸಾಗರ ಜಲಪಾತಕ್ಕೆ ಇನ್ನು ರೈಲ್ವೆ ಹಳಿಗಳ ಮೇಲೆ ಹಾಗೂ ಪ್ರಯಾಸ ಪಟ್ಟು ನಡೆದು ಹೋಗುವ ಆತಂಕವಿಲ್ಲ. ಗೋವಾದಿಂದ ಫಾಲ್ಸ್‌ಗೆ ಜೀಪ್ ಸೇವೆ ಪುನಾರಂಭವಾಗಿದ್ದು, ಪ್ರವಾಸಿಗರು ಜೀಪಲ್ಲೇ ಸಾಗಬಹುದು.
ಗೋವಾ ಸರ್ಕಾರ ಹಾಗೂ ಜೀಪು ಸೇವೆ ಒದಗಿಸುವ ದೂಧಸಾಗರ್ ಟೂರ್ ಆಪರೇಟರ್ಸ್ ಅಸೋಸಿಯೇಷನ್ (ಡಿಟಿಎಒ) ನಡುವೆ ಸಂಘರ್ಷ ಏರ್ಪಟ್ಟಿತ್ತು. ಇದೀಗ ಶನಿವಾರ ರಾತ್ರಿ ಗೋವಾ ಸಿಎಂ ಪ್ರಮೋದ್ ಸಾವಂತ್ ಹಾಗೂ ಡಿಟಿಎಒ ನಾಯಕರ ನಡುವೆ ನಡೆದ ಮಾತುಕತೆಯ ಫಲವಾಗಿ ಸಮಸ್ಯೆ ತಿಳಿಗೊಂಡಿದೆ. ಭಾನುವಾರದಿಂದ ಜೀಪ್ ಸೇವೆಗಳು ಪುನಾರಂಭಗೊಂಡಿವೆ. ಕುಲೆಂನಲ್ಲಿ ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಬುಕಿಂಗ್ ಸೆಂಟರ್ ತೆರೆದಿದ್ದು, ಅಲ್ಲಿಂದ ಜೀಪುಗಳು ದೂಧಸಾಗರಕ್ಕೆ ತೆರಳಲಿವೆ.
ಈ ಬುಕಿಂಗ್ ಸೆಂಟರ್‌ಗೆ ಜೀಪ್ ಮಾಲೀಕರು ಈ ಮುನ್ನ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಸೇವೆ ನಿಂತಿತ್ತು. ಜೀಪು ವ್ಯವಸ್ಥೆ ಇರದ ಕಾರಣ ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದ ಅಲ್ಲಿನ ಸ್ಥಳಿಯ ಉದ್ಯಮಗಳಾದ ಹೋಟೆಲ್, ಟೀ ಸ್ಟಾಲ್‌ಗಳಿಗೆ ನಷ್ಟ ಆಗುತ್ತಿತ್ತು. ಇನ್ಮುಂದೆ ಈ ಸಮಸ್ಯೆ ಇರುವುದಿಲ್ಲ ಎನ್ನಲಾಗಿದೆ.