ಬೆಂಗಳೂರು: ರಾಜ್ಯದಲ್ಲಿ ಲಭ್ಯವಿರುವ ಕುಡಿಯುವ ನೀರಿನ ಬಾಟಲ್ ಗುಣಮಟ್ಟ ಕುರಿತು ಆತಂಕಕಾರಿ ಮಾಹಿತಿಯೊಂದು ಬೆಳಕಿಗೆ ಬಂದಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿಯಂತೆ, ನೈಜ ಪರೀಕ್ಷೆಯಡಿಯಲ್ಲಿ ಪರೀಕ್ಷಿಸಲಾದ 474 ಬಾಟಲಿ ನೀರಿನ ಮಾದರಿಗಳಲ್ಲಿ 113 ಮಾದರಿಗಳು ಕುಡಿಯಲು ಅಸುರಕ್ಷಿತವಾಗಿವೆ ಎಂಬುದಾಗಿ ವರದಿಯಾಗಿದೆ.
ಈ ನೀರಿನ ಮಾದರಿಗಳನ್ನು ಕರ್ನಾಟಕದ ವಿವಿಧ ಭಾಗಗಳಿಂದ ಸಂಗ್ರಹಿಸಲಾಗಿತ್ತು. ಬೆಂಗಳೂರು ನಗರ, ಗ್ರಾಮಾಂತರ, ದಕ್ಷಿಣ ಕನ್ನಡ, ತುಮಕೂರು, ಉಡುಪಿ ಸೇರಿದಂತೆ ಅನೇಕ ಜಿಲ್ಲೆಗಳ ಮಾದರಿಗಳು ಈ ಪೈಕಿ ಸೇರಿವೆ.
ಪದಾರ್ಥಗಳ ಗುಣಮಟ್ಟದ ನಿಯಂತ್ರಣಕ್ಕಾಗಿ ಸಂಸ್ಥೆಗಳು ನಿರ್ದಿಷ್ಟ ಮಾನದಂಡಗಳನ್ನು ನಿಗದಿಪಡಿಸಿದರೂ, ಇಂತಹ ಅಸುರಕ್ಷಿತ ಬಾಟಲ್ ನೀರು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವುದು ಆರೋಗ್ಯದ ದೃಷ್ಟಿಯಿಂದ ಆತಂಕಕಾರಿ ಸಂಗತಿಯಾಗಿದ್ದು, ಸರ್ಕಾರ ಈ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಅಧಿಕಾರಿಗಳ ಪ್ರಕಾರ, ಅನಧಿಕೃತ ಕಂಪನಿಗಳು ಮಾನ್ಯತೆ ಇಲ್ಲದೆ ಬಾಟಲ್ ನೀರನ್ನು ಉತ್ಪಾದಿಸುತ್ತಿದ್ದು, ಅವುಗಳಲ್ಲಿ ಕೆಲವು ನದಿ ನೀರು ಅಥವಾ ಬೋರ್‌ವೆಲ್ ನೀರನ್ನು ಶುದ್ದೀಕರಣ ಮಾಡದೇ ಸೀಲ್ ಮಾಡಿ ಮಾರಾಟ ಮಾಡುತ್ತಿರುವುದಾಗಿ ಶಂಕಿಸಲಾಗಿದೆ.
ಸಾರ್ವಜನಿಕರು ಸರಿಯಾದ ISI ಗುರುತು ಹೊಂದಿರುವ ನೀರಿನ ಬಾಟಲಿಗಳನ್ನು ಮಾತ್ರ ಖರೀದಿಸುವಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.