ಲಕ್ನೋ: ಒಂದೇ ಮಂಟಪದಲ್ಲಿ ಒಡಹುಟ್ಟಿದವರು & ಸ್ನೇಹಿತರು ಮದುವೆಯಾಗುವುದನ್ನು ನಾವು ನೋಡಿರುತ್ತೇವೆ. ಆದರೆ, ಉತ್ತರಪ್ರದೇಶದ ಗೋರಖ್‌ಪುರ ಜಿಲ್ಲೆಯಲ್ಲಿ ಅಮ್ಮ ಮಗಳು ಒಂದೇ ಮಂಟಪದಲ್ಲಿ ವಿವಾಹವಾಗಿರುವ ಘಟನೆ ನಡೆದಿದೆ.
ಹೌದು ಗೋರಖ್‌ಪುರದ ಪಿಪ್ರೌಲಿ ಗ್ರಾಮದಲ್ಲಿ ಗುರುವಾರ ‘ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ’ ಅಡಿ 63 ವಿವಾಹಗಳು ನಡೆದಿವೆ. ವಿಧವಾ ಮಹಿಳೆ ಬೇಲಿ ದೇವಿ (53) ತನ್ನ ಗಂಡನ ಕಿರಿಯ ಸಹೋದರ ಜಗದೀಶ್ (55) ಅವರನ್ನು ವಿವಾಹವಾಗಿದ್ದಾರೆ. ಅದೇ ಮಂಟಪದಲ್ಲಿ ಅವರ ಮಗಳು ಇಂದು (27) ರಾಹುಲ್ (29) ಎಂಬ ವರನನ್ನು ವರಿಸಿದಳು. ಈ ಸಂದರ್ಭದಲ್ಲಿ ಬಿಡಿಒ ಆದ ಡಾ ಸಿ.ಎಸ್.ಕುಶ್ವಾಹ ಸತ್ಯಪಾಲ್ ಸಿಂಗ್ ಹಾಗು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬೇಲಿ ದೇವಿ ಅವರಿಗೆ ಮೂವರು ಪುತ್ರಿಯರು ಮತ್ತು ಇಬ್ಬರು ಗಂಡು ಮಕ್ಕಳಿದ್ದರು. ಬೇಲಿ ದೇವಿ ಅವರು 25 ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡಿದ್ದಳು. ಕಿರಿಯ ಮಗಳು ಇಂದೂ ಹೊರತುಪಡಿಸಿ ಬೇಲಿ ದೇವಿಯ ಎಲ್ಲಾ ಮಕ್ಕಳು ಮದುವೆಯಾಗಿ ತಮ್ಮ ಕುಟುಂಬಗಳೊಂದಿಗೆ ನೆಲೆಸಿದ್ದರಿಂದ, ಬೇಲಿ ದೇವಿ ತನ್ನ ಉಳಿದ ಜೀವನವನ್ನು ತನ್ನ ಸೋದರ ಮಾವ ಜಗದೀಶ್ (ತನ್ನ ಗಂಡನ ಕಿರಿಯ ಸಹೋದರ) ಅವರೊಂದಿಗೆ ಕಳೆಯಲು ನಿರ್ಧರಿಸಿ ವಿವಾಹವಾಗಿದ್ದಾರೆ. ಅವರ ಮಗಳು ಇಂದು (27), ಸಹ ಅದೇ ಸಾಮೂಹಿಕ ಸಮಾರಂಭದಲ್ಲಿ ವಿವಾಹವಾದರು.
ಬೇಲಿ ದೇವಿ ಅವರು ಮಾತನಾಡಿದ್ದು, ಜಗದೀಶ್ ಒಬ್ಬ ರೈತ ಇನ್ನೂ ಅವಿವಾಹಿತ. ಈಗಾಗಲೇ ನನ್ನ ಇಬ್ಬರು ಗಂಡು ಮಕ್ಕಳು ಹಾಗು ಇಬ್ಬರು ಹೆಣ್ಣು ಮಕ್ಕಳು ಮದುವೆಯಾಗಿದ್ದಾರೆ. ನನ್ನ ಕಿರಿಯ ಮಗಳ ವಿವಾಹದ ಜೊತೆಗೆ ನಾನು ಸಹ ನನ್ನ ‘ದೇವರ್’ (ಗಂಡನ ಕಿರಿಯ ಸಹೋದರ) ರನ್ನು ಮದುವೆಯಾಗಲು ನಿರ್ಧರಿಸಿದೆ. ನನ್ನ ಎಲ್ಲಾ ಮಕ್ಕಳು ಸಂತೋಷವಾಗಿದ್ದಾರೆ, ಜಗದೀಶ್ ಅವರೊಂದಿಗೆ ತನ್ನ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ.
ಇನ್ನೂ ಬೇಲಿ ದೇವಿ ಅವರ ಮಗಳು ಇಂದೂ 29 ವರ್ಷದ ರಾಹುಲ್ ಅವರನ್ನು ವಿವಾಹವಾಗಿದ್ದು, “ನನ್ನ ತಾಯಿಯ ಮದುವೆಯಿಂದ ನನ್ನ ಒಡಹುಟ್ಟಿದವರಲ್ಲಿ ಯಾರಿಗೂ ತೊಂದರೆ ಇಲ್ಲ. ನನ್ನ ತಾಯಿ ಮತ್ತು ಚಿಕ್ಕಪ್ಪ ನಮ್ಮನ್ನು ನೋಡಿಕೊಂಡರು. ಅವರು ಒಟ್ಟಾಗಿರುವುದಕ್ಕೆ ನಮಗೆ ಈಗ ತುಂಬಾ ಸಂತೋಷವಾಗಿದೆ ”ಎಂದು ಇಂದೂ ಹೇಳಿದರು.