ನವದೆಹಲಿ: ಜೆಡಿಎಸ್ ನಾಯಕ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಜವಾಬ್ದಾರಿಗಳು ಹೆಚ್ಚುತ್ತಲೇ ಇವೆ. ಆದರೆ ಇದು ಪ್ರೀತಿಯೋ? ಅಥವಾ ಅನಿವಾರ್ಯತೆಯೋ ಎನ್ನುವ ಬಗ್ಗೆಯೂ ಭಾರಿ ಚರ್ಚೆಯಾಗುತ್ತಿದೆ. ಹೌದು. ಕೃಷಿ ಖಾತೆ ಸಿಗದಿದ್ದರೂ, ಪ್ರಧಾನಿ ಮೋದಿಯವರ ಕ್ಯಾಬಿನೆಟ್‌ನಲ್ಲಿ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆಯನ್ನು ಎಚ್.ಡಿ.ಕುಮಾರಸ್ವಾಮಿ ಪಡೆದುಕೊಂಡಿದ್ದಾರೆ.
ಈ ಬೆನ್ನಲ್ಲೇ ಪುನರ್ ರಚನೆಗೊಂಡಿರುವ ನೀತಿ ಆಯೋಗದ ವಿಶೇಷ ಆಹ್ವಾನಿತರಾಗಿ ಎಚ್.ಡಿ.ಕುಮಾರಸ್ವಾಮಿ ನೇಮಕಗೊಂಡಿದ್ದಾರೆ. ಹೌದು. 2014ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದಾಗ, ಅಸ್ತಿತ್ವದಲ್ಲಿದ್ದ ಯೋಜನಾ ಆಯೋಗವನ್ನು ರದ್ದು ಪಡಿಸಿ, ಜೂನ್ 2014ರಲ್ಲಿ ನೀತಿ ಆಯೋಗದ ರಚನೆಯನ್ನು ಮಾಡಲಾಗಿತ್ತು.
ನೀತಿ ಆಯೋಗದ ಮುಖ್ಯಸ್ಥರಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉಪಾಧ್ಯಕ್ಷರಾಗಿ ಅರ್ಥಶಾಸ್ತ್ರಜ್ಞ ಸುಮನ್ ಕೆ. ಬೆರಿ ಮುಂದುವರಿಯಲಿದ್ದಾರೆ. ಇನ್ನು ಪೂರ್ಣ ಪ್ರಮಾಣದ ಸದಸ್ಯರಾಗಿ ವಿಜ್ಞಾನಿ ವಿ.ಕೆ. ಸಾರಸ್ವತ್, ಕೃಷಿ ಅರ್ಥಶಾಸ್ತ್ರಜ್ಞ ರಮೇಶ್ ಚಂದ್, ಮಕ್ಕಳ ತಜ್ಞ ವಿ.ಕೆ. ಪೌಲ್ ಮತ್ತು ಅರ್ಥಶಾಸ್ತ್ರಜ್ಞ ಅರವಿಂದ್ ವಿರ್ಮಾನಿ ಮುಂದುವರಿಯಲಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಬಿಜೆಪಿ ಮೈತ್ರಿಕೂಟ ಪಕ್ಷಗಳ ಸಚಿವರಾದ ಜಿತನ್ ರಾಮ್ ಮಾಂಝಿ, ರಾಜೀವ್ ರಂಜನ್ ಸಿಂಗ್, ಕೆ.ಆರ್.ನಾಯ್ಡು ಹಾಗೂ ಚಿರಾಗ್ ಪಾಸ್ವಾನ್ ಕೂಡಾ ವಿಶೇಷ ಆಹ್ವಾನಿತರಾಗಿ ನೇಮಕಗೊಂಡಿದ್ದಾರೆ. ಬಿಜೆಪಿಗೆ ಏಕಾಂಗಿಯಾಗಿ ಸರಳ ಬಹುಮತದ ನಂಬರ್ ಇಲ್ಲದೇ ಇರುವ ಕಾರಣಕ್ಕಾಗಿ, ಮಿತ್ರಪಕ್ಷಗಳ ಸದಸ್ಯರನ್ನೂ ನೀತಿ ಆಯೋಗದ ಸಮಿತಿಗೆ ಸೇರಿಸುವ ಅನಿವಾರ್ಯತೆಯಲ್ಲಿ ಪ್ರಧಾನಿ ಮೋದಿಯವರಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದಲ್ಲದೇ ಮೋದಿ ಸಂಪುಟದಿಂದ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸದಸ್ಯರಾಗಿದ್ದಾರೆ. ಈ ಹೊಸ ಸದಸ್ಯರ ಹೆಸರನ್ನು ಪ್ರಧಾನಿ ಮೋದಿ ಅನುಮೋದನೆ ಮಾಡಿದ್ದಾರೆ. ವಿಶೇಷ ಆಹ್ವಾನಿತರ ಪಟ್ಟಿ – 1 ಇನ್ನು, ವಿಶೇಷ ಆಹ್ವಾನಿತರಾಗಿ ಎಚ್.ಡಿ.ಕುಮಾರಸ್ವಾಮಿ, ಭೂಹೆದ್ದಾರಿ ಖಾತೆಯ ಸಚಿವ ನಿತಿನ್ ಗಡ್ಕರಿ, ಆರೋಗ್ಯ ಸಚಿವ ಜೆ.ಪಿ.ನಡ್ಡಾ, ಸಣ್ಣ ಉದ್ಯಮ ಖಾತೆಯ ಜಿತನ್ ರಾಮ್ ಮಾಂಝಿ, ಮೀನುಗಾರಿಕಾ ಸಚಿವ ಲಲ್ಲನ್ ಸಿಂಗ್, ಸಾಮಾಜಿಕ ನ್ಯಾಯ ಖಾತೆಯ ವೀರೇಂದ್ರ ಕುಮಾರ್, ನಾಗರಿಕ ವಿಮಾನಯಾನ ಖಾತೆಯ ರಾಮಮೋಹನ ನಾಯ್ಡು. ವಿಶೇಷ ಆಹ್ವಾನಿತರ ಪಟ್ಟಿ – 2 ಬುಡಕಟ್ಟು ವ್ಯವಹಾರ ಖಾತೆಯ ಜ್ಯೂಲ್ ಓರಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಅನ್ನಪೂರ್ಣ ದೇವಿ, ಆಹಾರ ಸಂಸ್ಕರಣೆ ಖಾತೆಯ ಚಿರಾಗ್ ಪಾಸ್ವಾನ್, ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆಯ ರಾವ್ ಇಂದ್ರಜಿತ್ ಸಿಂಗ್ ವಿಶೇಷ ಆಹ್ವಾನಿತರ ಪಟ್ಟಿಯಲ್ಲಿದ್ದಾರೆ.