ದ.ಕ. ಜಿಲ್ಲಾಧಿಕಾರಿ ಮತ್ತು ಕೊಡಗು ಎಸ್ಪಿಯ ಕ್ಷಿಪ್ರ ಕಾರ್ಯವೈಖರಿಗೆ ಮೆಚ್ಚುಗೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ನಲ್ಲಿ ಗುಡ್ಡ ಕುಸಿತವಾದ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಮೈಸೂರು-ಮಾಣಿ ಹೆದ್ದಾರಿಯ ಮಡಿಕೇರಿ ಘಾಟ್ ನ್ನು ಕಳೆದ ಗುರುವಾರ (18-07-2024) ರಾತ್ರಿ 8 ಗಂಟೆಗೆ ಯಾವುದೇ ಮುನ್ಸೂಚನೆ ನೀಡದೆ ಕೊಡಗು ಮತ್ತು ದ.ಕ. ಜಿಲ್ಲಾಡಳಿತ ಬಂದ್ ಮಾಡಿತ್ತು. ಮಡಿಕೇರಿ ಜನರಲ್ ಕಾರ್ಯಪ್ಪ ಸರ್ಕಲ್ ಬಳಿ ಮತ್ತು ಘಾಟಿ ಮಧ್ಯೆ ಮಲೆನಾಡಿನಲ್ಲಿ ಹಾಗೂ ಸಂಪಾಜೆ ಚೆಕ್ ಪೋಸ್ಟ್ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದರು. ಯಾವುದೇ ಮುನ್ಸೂಚನೆ ಇಲ್ಲದಿರುವುದರಿಂದ ನೂರಾರು ವಾಹನಗಳು ಅಡಕತ್ತರಿಯಲ್ಲಿ ಸಿಲುಕಿದ್ದವು.
ಹಲವಾರು ವಾಹನಗಳಲ್ಲಿದ್ದ ಮಹಿಳೆಯರು, ಮಕ್ಕಳು ಘಾಟ್ ಮಧ್ಯೆ ಮಲೆನಾಡು ಮತ್ತು ಸಂಪಾಜೆಯ ಕುಗ್ರಾಮದಲ್ಲಿ ಬಾಕಿಯಾಗಿದ್ದರು. ಹಿರಿಯ ಜೀವಗಳೂ ಒದ್ದಾಡಿದವು. ಜೋರಾಗಿ ಮಳೆ ಕೂಡಾ ಬರುತ್ತಿತ್ತು. ಘಾಟ್ ರಸ್ತೆಯಲ್ಲಿ ಯಾವುದೇ ಅನಾಹುತವಾಗದೇ ಇದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಹಠಾತ್ ರಸ್ತೆ ನಿರ್ಬಂಧ ಮಾಡಲಾಗಿತ್ತು. ಆ ರಸ್ತೆಯಾಗಿ ಮಧ್ಯರಾತ್ರಿ ಪ್ರಯಾಣಿಸುತ್ತಿದ್ದ ಮಂಗಳೂರಿನ.ಸಾಮಾಜಿಕ ಕಾರ್ಯಕರ್ತ ರಶೀದ್ ವಿಟ್ಲ ಅವರು ಈ ಬಗ್ಗೆ ಸ್ಪೀಕರ್ ಯು.ಟಿ. ಖಾದರ್ ಅವರ ಗಮನ ಸೆಳೆದರು. ರಶೀದ್ ಜೊತೆಗೆ ಅವರ ಸ್ನೇಹಿತ ಅಬೂಬಕರ್ ಪುತ್ತು ಕೂಡಾ ಇದ್ದರು. ಫೋನ್ ಮಾಡುವಾಗ ಮಧ್ಯರಾತ್ರಿ 12.30 ಆಗಿತ್ತು. ಯು.ಟಿ. ಖಾದರ್ ತಕ್ಷಣ ಮಂಗಳೂರು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಕೊಡಗು ಎಸ್ಪಿ ರಾಮರಾಜನ್ ಅವರಿಗೆ ಸೂಚಿಸಿ ಅವರಿಗೆ ವಸ್ತುಸ್ಥಿತಿಯ ವಿವರಣೆ ನೀಡುವಂತೆ ರಶೀದ್ ಗೆ ತಿಳಿಸಿದರು. ಸಮಸ್ಯೆಯ ಸ್ಥಳದಲ್ಲಿದ್ದ ರಶೀದ್ ವಿಟ್ಲ ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರನ್ನು ಫೋನ್ ಮೂಲಕ ಸಂಪರ್ಕಿಸಿ ಹಠಾತ್ ರಸ್ತೆ ಬಂದ್‌ನಿಂದ ವಾಹನ ಪ್ರಯಾಣಿಕರಿಗೆ ಆಗಿರುವ ತೊಂದರೆಗಳ ಬಗ್ಗೆ ಹಾಗೂ ದುಷ್ಪರಿಣಾಮಗಳ ಕುರಿತು ಗಮನಸೆಳೆದರು. ಹಲವಾರು ಮಹಿಳೆಯರು ಶೌಚಾಲಯ ಹೋಗದೆ ಮಳೆಯಲ್ಲಿ ಕಾಡು ಮಧ್ಯೆ ರಸ್ತೆಯಲ್ಲಿ ಸಿಲುಕಿರುವ ಗಂಭೀರತೆಯ ಅರಿವು ಮೂಡಿಸಿದರು.
ವಯಸ್ಕರು, ಮಕ್ಕಳು ಸೇರಿದಂತೆ ಇವರನ್ನೆಲ್ಲಾ ಬೆಳಗ್ಗಿನ ತನಕ ರಸ್ತೆಯಲ್ಲೇ ನಿಲ್ಲಿಸಿದರೆ ಅಪಾಯವಿರುವುದನ್ನು ಮನದಟ್ಟು ಮಾಡಿದರು. ಬೆಂಗಳೂರಿಗೆ ತೆರಳುತ್ತಿರುವ ಕೆಲವು ಎಮರ್ಜೆನ್ಸಿ ರೋಗಿಗಳ ಆಕ್ರಂದನದ ಹಾಗೂ ನಿತ್ಯ ಬಳಕೆಯ ವಸ್ತುಗಳ ಗೂಡ್ಸ್ ಲಾರಿಗಳು ಬಾಕಿಯಾಗಿರುವ ಮಾಹಿತಿಯನ್ನು ರಶೀದ್ ವಿಟ್ಲ ಅವರು ದ.ಕ. ಡಿ.ಸಿ. ಮತ್ತು ಕೊಡಗು ಎಸ್ಪಿಯವರಿಗೆ ನೀಡಿದ ಪರಿಣಾಮ ಆ ತಡರಾತ್ರಿಯಲ್ಲೂ ಕೂಡಲೇ ಕಾರ್ಯಪ್ರವೃತ್ತರಾದ ಉನ್ನತ ಅಧಿಕಾರಿಗಳು ಅತಂತ್ರ ಸ್ಥಿತಿಯಲ್ಲಿದ್ದ ಎಲ್ಲಾ ವಾಹನಗಳನ್ನು ರಾತ್ರಿ 1.30ಕ್ಕೆ ಪೊಲೀಸ್ ಇಲಾಖೆಯ ಹೈವೇ ಪ್ಯಾಟ್ರೋಲ್ ಗಳ ಮೂಲಕ ಪೊಲೀಸ್ ಎಸ್ಕಾರ್ಟ್ ಕಣ್ಗಾವಲಲ್ಲಿ ಸುರಕ್ಷಿತವಾಗಿ ಮಲೆನಾಡು ಪ್ರದೇಶದಿಂದ ಸಂಪಾಜೆಗೆ ತಲುಪಿಸುವ ವ್ಯವಸ್ಥೆ ಮಾಡಿದರು. ಸಂಪಾಜೆಯಿಂದ ಮಡಿಕೇರಿ ಕಡೆ ಹೋಗಬೇಕಾಗಿದ್ದ ವಾಹನಗಳನ್ನು ಅದೇ ಪೊಲೀಸ್ ಎಸ್ಕಾರ್ಟ್ ನಲ್ಲಿ ಮಡಿಕೇರಿಗೆ ಸುರಕ್ಷಿತವಾಗಿ ತಲುಪಿಸಿದರು. ಇದರಿಂದಾಗಿ ನೂರಾರು ವಾಹನಗಳಲ್ಲಿದ್ದ ಕುಟುಂಬಿಕರು ನಿಟ್ಟುಸಿರು ಬಿಡುವಂತಾಯಿತು. ಹೀಗೇ ಬರೋಬ್ಬರಿ ಐದು ತಾಸುಗಳಿಂದ ಮಧ್ಯರಾತ್ರಿ ಅರಣ್ಯದ ನಡುವೆ ಕಾದು ನಿರಾಶರಾಗಿ ಕಾರಿನಲ್ಲಿ ಬಂಧಿಯಾಗಿದ್ದ ನೂರಾರು ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿತು. ಜನ ಸಾಮಾನ್ಯರ ಕೂಗಿಗೆ ತಳಮಟ್ಟದ ಅಧಿಕಾರಿಗಳೂ ಫೋನ್ ಎತ್ತದ ಈ ಕಾಲದಲ್ಲಿ ರಾಜಕಾರಣಿ ಮತ್ತು ಉನ್ನತ ಅಧಿಕಾರಿಗಳು ಹೇಗೆ ಸ್ಪಂದಿಸಬೇಕು ಎಂದು ತಡರಾತ್ರಿಯೂ ಫೋನ್ ಕರೆ ಸ್ವೀಕರಿಸಿ ತಕ್ಷಣ ಸ್ಪಂದಿಸಿರುವ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಕೊಡಗು ಎಸ್ಪಿ ರಾಮರಾಜನ್ ಹಾಗೂ ಕೊಡಗು ಪೊಲೀಸರು ಇತರರಿಗೆ ಮಾದರಿಯಾಗಿ ತೋರಿಸಿಕೊಟ್ಟಿದ್ದಾರೆ.