ಮಂಗಳೂರು: ಇತಿಹಾಸ ಪ್ರಸಿದ್ಧ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ನಿಯಮ ಜಾರಿಯಾಗಿದೆ. ಹಿಂದೂಪರ ಸಂಘಟನೆಗಳು ಕಳೆದ ಹಲವು ವರ್ಷಗಳಿಂದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡ್ರೆಸ್ ಕೋಡ್ ಜಾರಿಗೆ ಮನವಿ ಮಾಡಿತ್ತು. ಇದೀಗ ದೇವಸ್ಥಾನದ ಆಡಳಿತ ದೇವಸ್ಥಾನದ ಮುಖ್ಯ ದ್ವಾರದ ಬಳಿಯೇ ಸೂಚನಾ ಫಲಕವನ್ನು ಹಾಕಲಾಗಿದ್ದು, ಮುಖ್ಯವಾಗಿ ಮಹಿಳೆಯರಿಗಾಗಿ ಈ ವಸ್ತ್ರಸಂಹಿತೆಯನ್ನು ಅಳವಡಿಸಲಾಗಿದೆ.
ಕಳೆದ ಹಲವು ವರ್ಷಗಳಿಂದ ದೇವಸ್ಥಾನ ಪ್ರವೇಶಿಸುವ ಭಕ್ತರಿಗೆ ವಸ್ತ್ರಸಂಹಿತೆ ಜಾರಿ ಮಾಡಬೇಕೆಂದು ಸಂಘಟನೆಗಳು ಮತ್ತು ಭಕ್ತರು ದೇವಸ್ಥಾನಕ್ಕೆ ಮನವಿ ಮಾಡಿಕೊಂಡೇ ಬರುತ್ತಿದ್ದವು. ದೇವಸ್ಥಾನದ ಈ ಹಿಂದಿನ ವ್ಯವಸ್ಥಾಪನಾ ಸಮಿತಿ ಈ ಸಂಬಂಧ ದೇವಸ್ಥಾನದ ಪ್ರವೇಶ ದ್ವಾರದ ಬಳಿ ಈ ಸಂಬಂಧ ಒಂದು ಸೂಚನಾ ಫಲಕವನ್ನೂ ಅಳವಡಿಸಿತ್ತು. ಆದರೆ ಕೆಲವೇ ದಿನಗಳು ಆ ಸೂಚನಾ ಫಲಕ ಮೂಲೆ ಗುಂಪಾಗಿತ್ತು. ಆದರೆ ಇದೀಗ ದೊಡ್ಡ ಬೋರ್ಡನ್ನು ಮುಖ್ಯ ದ್ವಾರದ ಬಳಿ ಅಳವಡಿಸಲಾಗಿದ್ದು, ಭಕ್ತರು ಈ ಫಲಕದಲ್ಲಿರುವ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.
ದೇವಸ್ಥಾನದಲ್ಲಿ ಹಾಕಿರುವ ವಸ್ತ್ರಸಂಹಿತೆಯ ಫಲಕಕ್ಕೆ ಭಕ್ತರೂ ಕೂಡ ಸ್ಪಂದಿಸುತ್ತಿದ್ದು, ಸ್ಥಳೀಯರು ಆದಷ್ಟು ಇದೇ ರೀತಿಯ ಡ್ರೆಸ್ ಮೂಲಕವೇ ದೇವಸ್ಥಾನಕ್ಕೆ ಬರಲಾರಂಭಿಸಿದ್ದಾರೆ. ಹಿಂದೂ ಸಂಪ್ರದಾಯಗಳನ್ನು ದೇವಸ್ಥಾನದಲ್ಲಿ ಪಾಲಿಸುವುದರಲ್ಲಿ ಯಾವುದೇ ತಪ್ಪಿಲ್ಲ. ದೇವಸ್ಥಾನಕ್ಕೆ ಬರುವಾಗ ಪರಿಶುದ್ಧವಾಗಿ, ಸಂಪ್ರದಾಯಿಕ ಬಟ್ಟೆಗಳನ್ನು ಧರಿಸಿ ಬರುವ ಅಗತ್ಯವಿದೆ. ಅದನ್ನು ಬಿಟ್ಟು ಬೀಚಿಗೋ, ಶಾಪಿಂಗ್‌ಗೋ ಹೋಗುವಂತೆ ಡ್ರೆಸ್ ಹಾಕಿದಲ್ಲಿ, ಅದು ಭಕ್ತರ ಏಕಾಗ್ರತೆಯನ್ನು ಕೆಡಿಸುತ್ತದೆ ಎನ್ನುವ ಆರೋಪವೂ ಭಕ್ತರದ್ದಾಗಿದೆ.
ಅದರಲ್ಲೂ ಮಹಿಳೆಯರು ಈ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎನ್ನುವುದು ಭಕ್ತರ ಆಗ್ರಹವೂ ಆಗಿದೆ. ಕೇವಲ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾತ್ರವಲ್ಲದೆ, ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲೂ ಈ ನಿಯಮ ಜಾರಿಗೆ ಬಂದರೆ ಉತ್ತಮ ಎನ್ನುತ್ತಾರೆ ಭಕ್ತರು. ಬೇರೆ ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರಗಳನ್ನು ಪ್ರವೇಶಿಸುವಾಗ ವಸ್ತ್ರಸಂಹಿತೆಯನ್ನು ಪಾಲಿಸಲಾಗುತ್ತದೆ. ಆದರೆ ಹಿಂದೂ ದೇವಸ್ಥಾನಗಳಲ್ಲಿ ಈ ನಿಯಮಗಳು ಇಲ್ಲದ ಕಾರಣ ದೇವಸ್ಥಾನಗಳಲ್ಲಿ ಡ್ರೆಸ್ ವಿಷಯದಲ್ಲಿ ಗೊಂದಲ ಏರ್ಪಡುತ್ತಿದೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ.