ಕುಂದಾಪುರ: ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಇಬ್ಬರು ಯುವಕರು ನೀರುಪಾಲಾದ ಘಟನೆ ಕುಂದಾಪುರ ತಾಲ್ಲೂಕಿನ ಬೀಜಾಡಿಯಲ್ಲಿ ನಡೆದಿದೆ. ಕುಂದಾಪುರ ಮೂಲದ ಅಜಯ್ ಹಾಗೂ ಬೆಂಗಳೂರಿನ ದಾಸರಹಳ್ಳಿ ಮೂಲದ ಸಂತೋಷ ನೀರುಪಾಲಾದ ದುರ್ದೈವಿ ಯುವಕರಾಗಿದ್ದಾರೆ.
ನಾಲ್ವರೂ ಯುವಕರು ಬೆಂಗಳೂರಿನಿಂದ ಕುಂದಾಪುರಕ್ಕೆ ಕಾರ್ಯಕ್ರಮವೊಂದರ ನಿಮಿತ್ತ ಆಗಮಿಸಿದ್ದು ಬೀಜಾಡಿಯ ರೆಸಾರ್ಟ್‌ವೊಂದರಲ್ಲಿ ತಂಗಿದ್ದರು. ಬೆಳಿಗ್ಗೆ ನೀರಿನಲ್ಲಿ ಈಜಾಡುವ ಉದ್ದೇಶದಿಂದ ನಾಲ್ವರೂ ಸ್ನೇಹಿತರು ಸಮುದ್ರಕ್ಕೆ ಇಳಿದಿದ್ದು ಈ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಇಬ್ಬರು ಯುವಕರು ಕೊಚ್ಚಿಹೋಗಿದ್ದಾರೆ. ಅದೃಷ್ಟವಶಾತ್ ನಾಲ್ವರ ಪೈಕಿ ಮೋಕ್ಷಿತ್ ಮತ್ತು ಶ್ರೀಯಾನ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.
ಇಬ್ಬರ ಪೈಕಿ ಸದ್ಯ ಕುಂದಾಪುರದ ಅಜಯ್ ಮೃತದೇಹ ಮಾತ್ರ ಪತ್ತೆಯಾಗಿದೆ. ಇನ್ನೋರ್ವ ಯುವಕ ನೀರಿನಲ್ಲಿ ಕಣ್ಮರೆಯಾಗಿದ್ದು, ಅಲೆಗಳ ಅಬ್ಬರ ಹೆಚ್ಚಿದ್ದ ಹಿನ್ನಲೆ ನಾಪತ್ತೆಯಾಗಿರುವ ಸಂತೋಷನಿಗಾಗಿ ಹುಡುಕಾಟ ಮುಂದುವರೆದಿದೆ. ಸ್ಥಳಕ್ಕೆ ಕುಂದಾಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.