ಕಾಸರಗೋಡು: ಜಾತ್ರೋತ್ಸವ ವೇಳೆ ಪಟಾಕಿ ಸಿಡಿದು ಹಲವರು ಗಾಯಗೊಂಡ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ. ಜಿಲ್ಲೆಯ ನೀಲೇಶ್ವರದ ವೀರರ್ ಕಾವು ದೇವಸ್ಥಾನದಲ್ಲಿ ಈ ಅವಘಡ ಸಂಭವಿಸಿದ್ದು 150ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ.
ದೇವಸ್ಥಾನದಲ್ಲಿ ಸೋಮವಾರ ಜಾತ್ರೋತ್ಸವ ನಿಮಿತ್ತ ತೆಯ್ಯಂಕೆಟ್ಟು ಮಹೋತ್ಸವ ನಡೆಸಲಾಗುತ್ತಿತ್ತು. ತಡರಾತ್ರಿ 12 ಗಂಟೆ ಸುಮಾರಿಗೆ ಕುಲಿಚು ತೊಟ್ಟಂ ಆಚರಣೆ ವೇಳೆ ಪಟಾಕಿ ಸಿಡಿಸುವ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಪಟಾಕಿ ದಾಸ್ತಾನು ಇರಿಸಿದ್ದ ಗೋದಾಮಿಗೆ ಕಿಡಿ ತಾಗಿ ಭಾರೀ ಸ್ಪೋಟ ಸಂಭವಿಸಿದ್ದು, 150ಕ್ಕೂ ಅಧಿಕ ಮಂದಿ ಗಾಯಗೊಂಡು, 5 ಜನರ ಪರಿಸ್ಥಿತಿ ಗಂಭೀರವಾಗಿದೆ.
ಗಾಯಾಳುಗಳನ್ನು ಕಣ್ಣೂರು, ಕಾಸರಗೋಡು ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವಘಡದಲ್ಲಿ ದೇವಸ್ಥಾನ ಆವರಣ ಸಹ ಬೆಂಕಿ ತಗುಲಿ ಹಾನಿಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.