ಕಾರವಾರ: ಕದಂಬ ನೌಕಾನೆಲೆ, ಕೈಗಾ ಅಣುವಿದ್ಯುತ್ ಸ್ಥಾವರದಂತಹ ದೇಶದ ಪ್ರತಿಷ್ಠಿತ ಯೋಜನೆಗಳನ್ನು ಹೊಂದಿರುವ ಕಾರವಾರ ಅತೀ ಸೂಕ್ಷ್ಮ ಪ್ರದೇಶವಾಗಿದೆ. ಕೆಲ ದಿನಗಳ ಹಿಂದೆ ನೌಕಾನೆಲೆ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ನಡೆಸಿದ್ದು ಸಾಕಷ್ಟು ಸದ್ದು ಮಾಡಿತ್ತು. ಇದೀಗ ನೌಕಾನೆಲೆ ಇರುವ ಕಾರವಾರ ಪ್ರದೇಶದಲ್ಲಿ ಟ್ಯಾಗ್ ಹಾಗೂ ಟ್ರ್ಯಾಕರ್ ರೀತಿ ಎಲೆಕ್ಟ್ರಾನಿಕ್ ವಸ್ತು ಅಳವಡಿಸಿದ್ದ ರಣಹದ್ದೊಂದು ಪ್ರತ್ಯಕ್ಷವಾಗಿದ್ದು ಆತಂಕ ಸೃಷ್ಟಿಸಿದೆ.
ನಗರದ ಕೋಡಿಭಾಗ್ ನದಿವಾಡದಲ್ಲಿ ಕಾಲುಗಳಲ್ಲಿ ಟ್ಯಾಗ್ ಹಾಗೂ ಬೆನ್ನ ಮೇಲೆ ಟ್ರ್ಯಾಕರ್ ರೀತಿಯ ಎಲೆಕ್ಟ್ರಾನಿಕ್ ಯಂತ್ರ ಅಳವಡಿಸಿದ್ದ ರಣಹದ್ದೊಂದು ಕಂಡುಬಂದಿದೆ. ಕರಾವಳಿ ಭಾಗದಲ್ಲಿ ರಣಹದ್ದುಗಳು ಕಾಣಸಿಗುವುದು ತೀರಾ ಅಪರೂಪವಾಗಿದೆ. ಹೀಗಿದ್ದಾಗ ಜನವಸತಿ ಪ್ರದೇಶದ ಬಳಿ ರಣಹದ್ದು ಕಾಣಿಸಿಕೊಂಡಿದ್ದು ಸಾರ್ವಜನಿಕರ ಗಮನ ಸೆಳೆದಿತ್ತು. ಈ ವೇಳೆ ರಣಹದ್ದನ್ನು ವೀಕ್ಷಿಸಿದಾಗ ಎರಡೂ ಕಾಲುಗಳಲ್ಲಿ ಇಂಗ್ಲೀಷ್ ಅಕ್ಷರಗಳಲ್ಲಿ ಬರೆದ ಟ್ಯಾಗ್‌ಗಳು ಪತ್ತೆಯಾಗಿದ್ದು, ಬೆನ್ನಿನ ಮೇಲೆ ಜಿಪಿಎಸ್ ಅಥವಾ ಟ್ರ್ಯಾಕರ್ ಮಾದರಿಯ ಎಲೆಕ್ಟ್ರಾನಿಕ್ ವಸ್ತುವನ್ನು ಅಳವಡಿಸಿರುವುದು ಕಂಡುಬಂದಿದೆ.
ಈ ರೀತಿಯ ರಣಹದ್ದನ್ನು ನೌಕಾನೆಲೆಯ ಗೂಢಾಚಾರಿಕೆ ನಡೆಸಲು ಬಳಸಿರಬಹುದು ಎನ್ನುವ ಶಂಕೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದು, ರಣಹದ್ದಿನ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಈ ರಣಹದ್ದು ಎಲ್ಲಿಂದ ಬಂದಿದೆ?, ಯಾವ ಕಾರಣಕ್ಕಾಗಿ ಜನವಸತಿ ಪ್ರದೇಶದಲ್ಲಿ ಇಳಿದಿದೆ? ಗೂಢಾಚಾರಿಕೆ ನಡೆಸಲು ಬಳಸಲಾಗಿದೆಯಾ? ಎನ್ನುವ ಕುರಿತು ಕೂಲಂಕುಷ ತನಿಖೆ ನಡೆದ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ.