ಕಾನ್ಪುರ (ಉತ್ತರ ಪ್ರದೇಶ): ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ಗೆ ತಯಾರಿ ನಡೆಸುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಪ್ರಸಿದ್ಧ ಕೋಚಿಂಗ್ ಸೆಂಟರ್‌ನ ಇಬ್ಬರು ಶಿಕ್ಷಕರು ಅತ್ಯಾಚಾರವೆಸಗಿ, ಬ್ಲಾಕ್‌ಮೇಲ್ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಈ ಸಂಬಂಧ ಇಬ್ಬರು ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ.
ಜೀವಶಾಸ್ತ್ರದ ಶಿಕ್ಷಕ ಸಾಹಿಲ್ ಸಿದ್ದಿಕಿ (32), ರಸಾಯನಶಾಸ್ತ್ರ ಶಿಕ್ಷಕ ವಿಕಾಸ್ ಪೋರ್ವಾಲ್ (39) ಬಂಧಿತರು. ಅಪ್ರಾಪ್ತ ಬಾಲಕಿಯೊಬ್ಬಳು ಇಲ್ಲಿನ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆಯುತ್ತಿದ್ದಳು. ಆಕೆಗೆ ತರಬೇತಿ ನೀಡುತ್ತಿದ್ದ ಸಿದ್ದಿಕಿ ತನ್ನ ಮನೆಯಲ್ಲಿ ಪಾರ್ಟಿ ಇದೆ ಎಂದು ಆಕೆಯನ್ನು ಆಹ್ವಾನಿಸಿದ್ದನು. ಆ ವೇಳೆ ಮನೆಗೆ ಹೋದ ಬಾಲಕಿ ಮೇಲೆ ಕುಡಿದ ಮತ್ತಿನಲ್ಲಿ ಸಿದ್ದಿಕಿ ಅತ್ಯಾಚಾರವೆಸಗಿದ್ದು, ವಿಡಿಯೋ ಚಿತ್ರೀಕರಿಸಿದ್ದಾನೆ. ಈ ವಿಷಯ ಯಾರಿಗಾದರೂ ಹೇಳಿದರೆ ನಿಮ್ಮ ಕುಟುಂಬದವರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಕೆಲವು ದಿನಗಳ ನಂತರ ಮತ್ತೊಂದು ಪಾರ್ಟಿಗೆ ಆಹ್ವಾನಿಸಿದ್ದು, ಅಲ್ಲಿ ವಿಕಾಸ್ ಪೋರ್ವಾಲ್ ಅವರೂ ಸಹ ಅತ್ಯಾಚಾರವೆಸಗಿದ್ದಾನೆ. ಹೀಗೆ ಇಬ್ಬರೂ ಶಿಕ್ಷಕರು ತಿಂಗಳುಗಳಗಟ್ಟಲೇ ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು.
ಇತ್ತೀಚೆಗೆ ತನ್ನ ಊರಿಗೆ ತೆರಳಿದ್ದ ಬಾಲಕಿ ಈ ವಿಚಾರವನ್ನು ತನ್ನ ಕುಟುಂಬಸ್ಥರಿಗೆ ತಿಳಿಸಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಅವರನ್ನ ಬಂಧಿಸಲಾಗಿದೆ.